ಕೆಜಿಎಫ್ 2 ಸಂಜಯ್ ದತ್ ಲುಕ್

ಅಲ್ಲಮಪ್ರಭುದೇವರ ಎಲ್ಲ ವಚನಗಳ ಸಾಹಿತ್ಯ

ವಚನಕಾರ: ಅಲ್ಲಮಪ್ರಭುದೇವರು, ಅಂಕಿತ ನಾಮ: ಗುಹೇಶ್ವರ, ಕಾಲ: 1160
————–

ಅರಿತು ಜನ್ಮವಾದವರಿಲ್ಲ ಸತ್ತು ಮರಳಿ ತೋರುವರಿಲ್ಲ. ದುರಭಿಮಾನವ ಹೊತ್ತು ಅಘಟಿತ ಘಟಿತವ ನುಡಿವಿರಿ. ಈ ದೇಹವಿಡಿದು ನುಡಿವ ಪ್ರಪಂಚಿಗಳನೇನೆಂಬೆ ಗುಹೇಶ್ವರಾ.
————–

ಅಂಗಸೋಂಕೆಂಬುದು ಅಧಮವು. ಉರಸೆಜ್ಜೆಯೆಂಬುದು ಎದೆಯ ಗೂಂಟ. ಕಕ್ಷೆಯೆಂಬುದು ಕವುಚಿನ ತವರುಮನೆ. ಅಮಳೋಕ್ಯವೆಂಬುದು ಬಾಯ ಬಗದಳ. ಮುಖಸೆಜ್ಜೆಯೆಂಬುದು ಪಾಂಡುರೋಗ. ಕರಸ್ಥಳವೆಂಬುದು ಮರವಡದ ಕುಳಿ. ಉತ್ತಮಾಂಗವೆಂಬುದು ಸಿಂಬಿಯ ಕಪ್ಪಡ. ಎಲ್ಲರಿಗೆಯೂ ಸೋಂಕಾಯಿತ್ತು ! ಈ ಹಸಿಯ ಗೂಂಟದಲ್ಲಿ ಕಟ್ಟಿ, ಒಣಗಿದ ಗೂಂಟದಲ್ಲಿ ಬಿಡುವ ಬಾಲಭಾಷೆಯ ಭಂಡರ ನುಡಿಯ ಕೇಳಲಾಗದು ಗುಹೇಶ್ವರಾ.
————–

ಅನಲನಾರಣ್ಯದೊಳಗೆ ಎದ್ದಲ್ಲಿ; ದೂ(ಧು?)ರದೆಡೆಯಲಾರನೂ ಕಾಣೆವು, ಸಂಗ್ರಾಮಧೀರರೆಲ್ಲರೂ ನೆಲೆಗೆಟ್ಟರಾಗಿ ! ಮಾಯಾಮಂಜಿನ ಕೋಟೆಗೆ, ರಂಜನೆಯ ಕೊತ್ತಳ, ಅಂಜನೆಯ ಕಟ್ಟಳೆ. ಗುಹೇಶ್ವರನು ಶರಣ ಐಕ್ಯಸ್ಥಲವ ಮೆಟ್ಟಲೊಡನೆ, ಸರ್ವವೂ ಸಾಧ್ಯವಾಯಿತ್ತು.
————–

ಅಟ್ಟುದನಡಲುಂಟೆ ? ಸುಟ್ಟುದ ಸುಡಲುಂಟೆ ? ಜ್ಞಾನಾಗ್ನಿಯಲ್ಲಿ ದಗ್ಧವಾದ ಪರಮಶಿವಯೋಗಿಗೆ ಹುಟ್ಟು ಹೊಂದೆಂಬ ಉಭಯ ಜಡತೆಯುಂಟೆ ? ಅದೆಂತೆಂದಡೆ: “ದಗ್ಧಸ್ಯ ದಹನಂ ನಾಸ್ತಿ ಪಾಕಸ್ಯ ಪಚನಂ ನ ಹಿ ಜ್ಞಾನಾಗ್ನಿರ್ದಗ್ಧದೇಹಸ್ಯ ನ ಚ ದಾಹೋ ನ ಚ ಕ್ರಿಯಾ ” ಎಂದುದಾಗಿ_ ನಮ್ಮ ಗುಹೇಶ್ವರಲಿಂಗವನೊಡಗೂಡಿ, ಎರಡಳಿದು ನಿಂದ, ಮಹಾಮಹಿಮಂಗೆ ಪರಿಭವವಿಲ್ಲ ಕಾಣಿರೊ.
————–

ಅಂತರಂಗದಲ್ಲಿ ಭವಿಯನೊಳಕೊಂಡು, ಬಹಿರಂಗದಲ್ಲಿ ಭಕ್ತಿಯನೊಳಕೊಂಡು, ಆತ್ಮಸಂಗದಲ್ಲಿ ಪ್ರಸಾದವನೊಳಕೊಂಡು, ಇಪ್ಪ ಭಕ್ತರ ಕಾಣೆನಯ್ಯಾ ನಾನು, ಇಂತಪ್ಪ ಲಿಂಗೈಕ್ಯರ ಕಾಣೆನಯ್ಯಾ. ಅಂತರಂಗದಲ್ಲಿ ಸುಳಿದಾಡುವ ತನುಗುಣಾದಿಗಳ, ಮನಗುಣಾದಿಗಳ, ಪ್ರಾಣಗುಣಾದಿಗಳ ಕಳೆದಲ್ಲಿ ಶರಣರಹರೆ ? ತನು ಮನ ಧನವ ಕೊಟ್ಟಲ್ಲಿ ಭಕ್ತರಹರೆ ? ಉಂಬವರ ಕಂಡು ಕೈನೀಡಿದಡೆ ಪ್ರಸಾದಿಗಳಹರೆ ? ಅಂತರಂಗ ಬಹಿರಂಗ ಆತ್ಮಸಂಗ_ಈ ತ್ರಿವಿಧದ ಭೇದವ ಗುಹೇಶ್ವರಾ ನಿಮ್ಮ ಶರಣ ಬಲ್ಲ.
————–

ಅಯ್ಯ, ಮಣ್ಣಿಂಗೆ ಹೊಡೆದಾಡುವಾತನ ಗುರುವೆಂಬೆನೆ? ಆತ ಗುರುವಲ್ಲ. ಹೆಣ್ಣಿಂಗೆ ಹೊಡೆದಾಡುವಂತಾ [ಗೆ?]À ಲಿಂಗವೆಂಬೆನೆ ? ಅದು ಲಿಂಗವಲ್ಲ. ಹೊನ್ನಿಂಗೆ ಹೊಡೆದಾಡುವಾತನ ಜಂಗಮವೆಂಬೆನೆ ? ಆತ ಜಂಗಮವಲ್ಲ. ಈ ತ್ರಿವಿಧಮಲಕ್ಕೆ ಹೊಡೆದಾಡುವಾತನ ಶರಣನೆಂಬೆನೆ ? ಆತ ಶರಣನಲ್ಲ ನೋಡಾ. ಈ ವಿಚಾರವನರಿದು, ಮಲತ್ರಯಂಗಳ ಸರ್ವಾವಸ್ಥೆಯಲ್ಲಿ ಹೊದ್ದಲೀಯದೆ ಗೌರವ ಬುದ್ಧಿ ಲಿಂಗಲೀಯ ಜಂಗಮಾನುಭಾವ ಸರ್ವಾಚಾರಸಂಪತ್ತಿನಾಚರಣೆಯ ಶ್ರುತಿ_ಗುರು_ಸ್ವಾನುಭಾವದಿಂದರಿದು ಆಚರಿಸಿದಡೆ, ಗುಹೇಶ್ವರಲಿಂಗದಲ್ಲಿ ಪರಾತ್ಪರಗುರುಲಿಂಗಜಂಗಮಶರಣನೆಂಬೆ ನೋಡ ಜೆನ್ನಬಸವಣ್ಣ.
————–

ಅಯ್ಯ ! ಕಾರ್ಯನಲ್ಲ ಕಾರಣನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಭೇದಕನಲ್ಲ ಸಾಧಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಪಾತಕನಲ್ಲ ಸೂತಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ದ್ವೈತನಲ್ಲ ಅದ್ವೈತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಕಾಟಕನಲ್ಲ ಕೀಟಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಎನ್ನವನಲ್ಲ ನಿನ್ನವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಸಂಕಲ್ಪನಲ್ಲ ವಿಕಲ್ಪನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಒಮ್ಮೆ ಆಚಾರದವನಲ್ಲ ಒಮ್ಮೆ ಅನಾಚಾರದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಕುಂಟಣಿಯಲ್ಲ ನೆಂಟಣಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ದುಶ್ಶೀಲನಲ್ಲ ದುರ್ಮಾರ್ಗಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಜಾತಿಯವನಲ್ಲ ಅಜಾತಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಇಂದು ಉಭಯವಳಿದು ಬೆಳಗುವ ಸಂಗನಬಸವಣ್ಣನ ಉನ್ಮನಾಗ್ರದಲಿ ಹೊಳೆವಾತ ತಾನೆ ನೋಡ ! ಗುಹೇಶ್ವರಲಿಂಗವು ಚೆನ್ನಬಸವಣ್ಣ.
————–

ಅಗ್ನಿ ಮುಟ್ಟಿದುದುವೊ, ಆಕಾಶದಲದೆವೊ ಉದಕ ಮುಟ್ಟಿದುದುವೊ, ನಿರಾಳದಲದೆವೊ ಬ್ರಹ್ಮರಂಧ್ರದಲದೆವೊ_ಭ್ರಮಿಸದೆ ನೋಡಾ ! ಆವಂಗೆಯೂ ಅಸದಳ, ಆವಂಗೆಯೂ ಅರಿಯಬಾರದು! ಇದೇನು ಮಾಯೆ ಹೇಳಾ ಗುಹೇಶ್ವರಾ ?
————–

ಅರಿವಿನೊಳಗೊಂದು ಮರವೆಯದೆ, ಮರವೆಯೊಳಗೊಂದು ಅರಿವದೆ. ಅರಿವು ಮರವೆಯೆಂಬೆರಡೂ ಅಳಿದಡೆ ನಿರ್ಣಯವದೆ (ನಿರ್ವಯಲಿದೆ?). ತಾನೆಂಬಲ್ಲಿ ನಿಷ್ಪತಿಯಿದೆ_ಇದೇನು ಹೇಳಾ ಗುಹೇಶ್ವರಾ?
————–

ಅನಾದಿಯ ಮಗನು ಆದಿ, ಆದಿಯ ಮಗನತೀತ, ಅತೀತನ ಮಗನು ಆಕಾಶ,. ಆಕಾಶನ ಮಗನು ವಾಯು, ವಾಯುವಿನ ಮಗನಗ್ನಿ, ಅಗ್ನಿಯ ಮಗನು ಅಪ್ಪು, ಅಪ್ಪುವಿನ ಮಗನು ಪೃಥ್ವಿ. ಪೃಥ್ವಿಯಿಂದ ಸಕಲ ಜೀವರೆಲ್ಲರು ಉದ್ಭವಿಸಿದರು ಗುಹೇಶ್ವರಾ
————–

ಅಂಗವಿಲ್ಲಾಗಿ ಅನ್ಯಸಂಗವಿಲ್ಲ, ಅನ್ಯಸಂಗವಿಲ್ಲಾಗಿ ಮತ್ತೊಂದ ವಿವರಿಸಲಿಲ್ಲ. ಮತ್ತೊಂದ ವಿವರಿಸಲಿಲ್ಲಾಗಿ ನಿಸ್ಸಂಗವಾಯಿತ್ತಯ್ಯಾ. ಗುಹೇಶ್ವರಾ ನಿಮ್ಮ ನಾಮವಿಂತುಟಯ್ಯಾ
————–

ಅಧರ ತಾಗಿದ ರುಚಿಯ, ಉದರ ತಾಗಿದ ಸುಖವ, ಲಿಂಗಾರ್ಪಿತವ ಮಾಡಿದಡೆ ಕಿಲ್ಬಿಷ ನೋಡಿರೆ. ಓಗರ ಪ್ರಸಾದವಲ್ಲ; ಪ್ರಸಾದ ಅರ್ಪಿತವಲ್ಲ. ಇದನರಿದ ಶರಣಂಗೆ ಆಚಾರವಿಲ್ಲ, ಆಚಾರವಿಲ್ಲದ ಶರಣಂಗೆ ಲಿಂಗವಿಲ್ಲ. ಲಿಂಗವಿಲ್ಲದ ಶರಣನ ನಿಲವು; ಶಿವಸಂಪತ್ತಿನಲಾದ ಉದಯ, ವಿಪರೀತ ಸುಳುಹು ! ಪ್ರಕಟಸಂಸಾರದ ಬಳಕೆಯ ಹೊಡಕಟ್ಟಿ ಹಾಯ್ದು ನಿಬ್ಬೆರಗು ಎಸೆವುದು ಅರಿವಿನ (ಎರವಿನ?) ಘಟದಲ್ಲಿ ! ಅರ್ಪಿಸಿದ ಪ್ರಸಾದವನು ಭೇದದಿಂದ ರುಚಿಸುವನಲ್ಲ ಕೇಳಿರಯ್ಯಾ. ದಿಟವ ಬಿಟ್ಟು ಸಟೆಯಲ್ಲಿ ನಡೆಯ ನೋಡಾ. ಇಲ್ಲದ ಲಿಂಗವನುಂಟುಮಾಡಿ ಪೂಜಿಸುವ, ಬರಿಯ ಬಣ್ಣಕರೆಲ್ಲ ನೀವು ಕೇಳಿರೆ. ನೀವು ಪೂಜಕರಪ್ಪಿರಲ್ಲದೆ, ಗುಹೇಶ್ವರಲಿಂಗವಿಲ್ಲೆಂಬ ಶಬುದ ಸತ್ತು ಹುಟ್ಟುವರಿಗೆಲ್ಲಿಯದೊ ?
————–

ಅರಿವಿನೊಳಗಣ ಮರಹು, ಮರಹಿನೊಳಗಣ ಅರಿವು ! ಅರಿದು ಮರೆದು ನೆನೆದಡೆ ನೆಲೆಗೊಳ್ಳದು. ಅರಿವರಾರಯ್ಯ ಆಗಮ್ಯಲಿಂಗವನು ? ಕೊಟ್ಟು ಕೊಂಡಾಡುವ ವ್ಯವಹಾರಕ್ಕೆಲ್ಲಿಯದೊ ? ನೀರಲೊದಗಿದ ಬೆಣ್ಣೆ ಮುಗಿಲಲೊದಗಿದ ಕಿಚ್ಚು ಪವನನ ಶಬ್ದಸಂಚಕ್ಕೆ ಬಣ್ಣವುಂಟೆ ? ಗುಹೇಶ್ವರಲಿಂಗದ ನಿಲವ ತೋರಬಾರದು_ಕೇಳಾ ಸಂಗನಬಸವಣ್ಣಾ.
————–

ಅರಿದು ನೆನೆಯಲಿಲ್ಲ, ಮರೆದು ಪೂಜಿಸಲಿಲ್ಲ. ತೆರಹಿಲ್ಲದ ಘನಕ್ಕೆ ಕುರುಹು ಮುನ್ನಿಲ್ಲ. ತನಗೆ ಗುರುವಿಲ್ಲ, ಗುರುವಿಗೆ ತಾನಿಲ್ಲ ಗುರುವಿಗೆ ಶಿಷ್ಯನು ಹೊಡವಡುವ ಕಾರಣ ಮುನ್ನಿಲ್ಲ. ಬಯಲ ಬಿತ್ತಲಿಲ್ಲ, ಬೆಳೆಯಲಿಲ್ಲ, ಒಕ್ಕಲಿಲ್ಲ, ತೂರಲಿಲ್ಲ, ಗುಹೇಶ್ವರನೆಂಬ ಲಿಂಗಕ್ಕೆ ಕುರುಹು ಮುನ್ನಿಲ್ಲ.
————–

ಅಜ್ಞಾನಿಯಾದವಂಗೆ ಅರಿವು ತಾನೆಲ್ಲಿಯದೊ ? ಸುಜ್ಞಾನಿಯಾದವಂಗೆ ಮರಹು ತಾನೆಲ್ಲಿಯದೊ ? ನಾನರಿದೆನೆಂಬಾತ ಇದಿರ ಕೇಳಲುಂಟೆ ? ಭ್ರಾಂತಿನ ಭ್ರಮೆಯೊಳಗೆ ಬಳಲುತ್ತಿರಲು ಮಾತಿನ ಮಾತಿನೊಳಗೆ ಅರಿವೆಂಬುದುಂಟೆ ? ಸೂತಕ ಹಿಂಗದೆ ಸಂದೇಹವಳಿಯದೆ, ಮುಂದಣ ಸೂಕ್ಷ್ಮವ ಕಾಬ ಪರಿಯೆಂತೊ? ಜ್ಯೋತಿಯ ಬಸಿರೊಳಗೆ ಜನಿಸಿದ ಕಾಂತಿಯೂಥ(ಯುತ?) ಬೆಳಗು ಗುಹೇಶ್ವರಾ ನಿಮ್ಮ ಶರಣ !
————–

ಅಗ್ಗಣಿತಹೈಸಕ್ಕೆ ಅನಂತಯುಗಂಗಳು ಹೋಗುತ್ತಿವೆಯಯ್ಯಾ. ಪುಷ್ಪತಹೈಸಕ್ಕೆ ಅನಂತಯುಗಂಗಳು ಹೋಗುತ್ತಿವೆಯಯ್ಯಾ. ಲಿಂಗಾರ್ಚನೆ ಘನಲಿಂಗಕ್ಕೆಡೆಯಿಲ್ಲ ! ಗುಹೇಶ್ವರಾ ಸಿದ್ಧರಾಮಯ್ಯದೇವರಿಗೆ ಆರೋಗಣೆಯಿಲ್ಲ, ಶರಣರಿಗೆ ಪ್ರಸಾದವಿಲ್ಲ.
————–

ಅಂಬುದ್ಥಿs ಉರಿಯಿತ್ತು ಅವನಿಯ ಮೇಲನರಿಯಲು. ಕೋಡೆರಡರೊಳೊಂದ ತಿಳಿದು, ವಾಯುವ ಬೈಯುತ್ತ, ತುಂಬಿ ಅಮೃತವ ಕಂಡು ಪ್ರಾಣನಾಥಂಗೆ ಅರ್ಪಿತವ ಮಾಡಿ, ಆ ಪ್ರಸಾದದಿಂದ ಸುಖಿಯಾದೆನಯ್ಯಾ_ಗುಹೇಶ್ವರಾ.
————–

ಅರಿದ ಶರಣಂಗೆ ಆಚಾರವಿಲ್ಲ, ಆಚಾರವುಳ್ಳವಂಗೆ ಲಿಂಗವಿಲ್ಲ. ಲಿಂಗವಿಲ್ಲದ ಶರಣನ ಸುಳುಹು ಜಗಕ್ಕೆ ವಿಪರೀತ, ಚರಿತ್ರವದು ಪ್ರಕಟವಲ್ಲ ನೋಡಾ ! ಸಂಸಾರಿ ಬಳಸುವ ಬಯಕೆಯನೆಂದೂ ಹೊದ್ದನು. ಸಟೆಯ ಹಿಡಿದು ದಿಟವ ಮರೆದು, ಇಲ್ಲದ ಲಿಂಗವನು ಉಂಟೆಂದು ಪೂಜಿಸುವರಾಗಿ ಆಚಾರವುಂಟು, ಆಚಾರವುಳ್ಳವಂಗೆ ಗುರುವುಂಟು, ಗುರುವುಳ್ಳವಂಗೆ ಲಿಂಗವುಂಟು, ಲಿಂಗಪೂಜಕಂಗೆ ಭೋಗವುಂಟು. ಈ ಬರಿಯ ಬಾಯ ಬಣ್ಣಕರೆಲ್ಲರೂ ಪೂಜಕರಾದರು. ಗುಹೇಶ್ವರಲಿಂಗವು ಅಲ್ಲಿ ಇಲ್ಲವೆಂಬುದನು; ಈ ವೇಷಲಾಂಛನರೆತ್ತಬಲ್ಲರು ಹೇಳಾ ಸಂಗನಬಸವಣ್ಣ.
————–

ಅಘಟಿತ ಘಟಿತನೆ ವಿಪರೀತ ಚರಿತ್ರನೆ, ಸಾವರ ಕೈಯಲ್ಲಿ ಪೂಜೆಗೊಂಬರೆ ಲಿಂಗಯ್ಯಾ ? ಸಾವರ ನೋವರ ಕೈಯಲ್ಲಿ ಪೂಜೆಗೊಂಬುದು ಲಜ್ಜೆ ಕಾಣಾ _ ಗುಹೇಶ್ವರಾ.
————–

ಅಯ್ಯ ತತ್ತ್ವ ವಿತತ್ತ್ವಗಳಿಲ್ಲದಂದು, ಪ್ರಕೃತಿ ಪುರುಷರಿಲ್ಲದಂದು, ಜೀವ_ಪರಮರೆಂಬ ಭಾವ ತಲೆದೋರದಂದು, ಏನೂ ಏನೂ ಇಲ್ಲದಂದು ಬಯಲು ಬಲಿದು ಒಂದು ಬಿಂದುವಾಯಿತ್ತು ನೋಡಾ. ಆ ಬಿಂದು ಅಕ್ಷರತ್ರಯದ ಗದ್ದುಗೆಯಲ್ಲಿ ಕುಳ್ಳಿರಲು ಓಂಕಾರ ಉತ್ಪತ್ತಿಯಾಯಿತ್ತು. ಆ [ಓಂಕಾರದ] ನಾದದಲ್ಲಿ ಮೂರ್ತಿಗೊಂಡನೊಬ್ಬ ಶರಣ. ಆ ಶರಣನಿಂದಾಯಿತ್ತು ಪ್ರಕೃತಿ, ಆ ಪ್ರಕೃತಿಯಿಂದಾಯಿತ್ತು ಲೋಕ. ಈ ಲೋಕ ಲೌಕಿಕವನತಿಗಳೆದು ನಿಜದಲ್ಲಿ ನಿವಾಸಿಯಾಗಿಪ್ಪ, ಗುಹೇಶ್ವರನ ಶರಣ ಚೆನ್ನಬಸವಣ್ಣನ ಘನವನು ಬಸವಣ್ಣನ ಕೃಪೆಯಿಂದಲರಿದು ನಮೋ ನಮೋ ಎನುತಿರ್ದೆನು.
————–

ಅನಾದಿಯ ಭ್ರೂಮಧ್ಯದಲ್ಲಿ, ಐದು ಕುದುರೆಯ ಕಟ್ಟಿದ ಕಂಬ, ಮುರಿಯಿತ್ತು ! ಎಂಟಾನೆ ಬಿಟ್ಟೋಡಿದವು ! ಹದಿನಾರು ಪ್ರಜೆ ಬೊಬ್ಬಿಡುತಿರ್ದರು. ಶತಪತ್ರಕಮಲಕರ್ಣಿಕೆಯ ಮಧ್ಯದಲ್ಲಿ ಗುಹೇಶ್ವರಲಿಂಗ ಶಬ್ದ ಮುಗ್ಧವಾಗಿರ್ದನು.
————–

ಅನಾದಿಪುರುಷ ಬಸವಣ್ಣಾ, ಕಾಲ ಮಾಯೆಗಳೆರಡೂ ನಿಮ್ಮ ಮುಂದಿರ್ದು, ನಿಮ್ಮ ಕಾಣೆವೆನುತ್ತಿಹವು. ಆದಿಪುರುಷ ಬಸವಣ್ಣಾ; ಸುರಾಸುರರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು. ನಾದಪುರುಷ ಬಸವಣ್ಣಾ, ನಾದ ಮಂತ್ರಗಳು ಪಂಚಮಹಾವಾದ್ಯಂಗಳು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹವು. ವೇದಪುರುಷ ಬಸವಣ್ಣಾ, ವೇದಶಾಸ್ತ್ರಾಗಮ ಪುರಾಣಂಗಳು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹವು. ಆಗಮ್ಯಪುರುಷ ಬಸವಣ್ಣಾ, ಅಂಗಾಲ ಕಣ್ಣವರು ಮೈಯೆಲ್ಲ ಕಣ್ಣವರು ನಂದಿವಾಹನರು ಗಂಗೆವಾಳುಕರೆಲ್ಲರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು. ಅಗೋಚರಪುರುಷ ಬಸವಣ್ಣಾ, ಈ ಗೋಚರಿಸಿದ ಮನುಮುನಿ ದೇವದಾನವ ಮಾನವರೆಲ್ಲರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು. ಅಪ್ರಮಾಣಪುರುಷ ಬಸವಣ್ಣ, ಈ ಪ್ರಮಾಣರೆಲ್ಲರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು. ಸರ್ವಜ್ಞಪುರುಷ ಬಸವಣ್ಣಾ, ಈ ಸರ್ವರು ನಿಮ್ಮ ಬಳಸಿರ್ದು ನಿಮ್ಮ ಕಾಣೆವೆನುತ್ತಿಹರು. ಇಂತೀ ಸರ್ವಪ್ರಕಾರದವರೆಲ್ಲರೂ ನಿಮ್ಮ ಸಾಧಿಸಿ ಭೇದಿಸಿ ಪೂಜಿಸಿ ತರ್ಕಿಸಿ ಹೊಗಳಿ ಕಾಣದೆ ನಿಮ್ಮಿಂದವೆ ಉತ್ಪತ್ತಿ ಸ್ಥಿತಿಲಯಂಗಳಾಗುತ್ತಿಹರು. ಅದು ಕಾರಣ,_ನಮ್ಮ ಗುಹೇಶ್ವರಲಿಂಗದಲ್ಲಿ ಭಕ್ತಿವಡೆದ ಅನಂತ ಭಕ್ತರೆಲ್ಲ ಬಸವಣ್ಣ ಬಸವಣ್ಣ ಬಸವಣ್ಣ ಎನುತ್ತ ಬದುಕಿದರಯ್ಯಾ.
————–

ಅನ್ನವನಿಕ್ಕಿ ನನ್ನಿಯ ನುಡಿದು ಅರವಟ್ಟಿಗೆಯನಿಕ್ಕಿ ಕೆರೆಯ ಕಟ್ಟಿಸಿದಡೆ ಮರಣದಿಂದ ಮೇಲೆ ಸ್ವರ್ಗ ಉಂಟಲ್ಲದೆ ಶಿವನ ನಿಜವು ಸಾಧ್ಯವಾಗದು. ಗುಹೇಶ್ವರನನರಿದ ಶರಣಂಗೆ ಆವ ಫಲವೂ ಇಲ್ಲ
————–

ಅಂದಂದಿನ ಮಾತನು ಅಂದಂದಿಗೆ ಅರಿಯಬಾರದು. ಹಿಂದೆ ಹೋದ ಯುಗಪ್ರಳಯಂಗಳ ಬಲ್ಲವರಾರಯ್ಯಾ ? ಮುಂದೆ ಬಪ್ಪ ಯುಗಪ್ರಳಯಂಗಳ ಬಲ್ಲವರಾರಯ್ಯಾ ? ಬಸವಣ್ಣನು ಆದಿಯಲ್ಲಿ ಲಿಂಗಶರಣನೆಂಬುದ ಭೇದಿಸಿ ನೋಡಿ ಅರಿವರಿನ್ನಾರಯ್ಯಾ ? ಲಿಂಗ ಜಂಗಮ ಪ್ರಸಾದದ ಮಹಾತ್ಮೆಗೆ ಬಸವಣ್ಣನೆ ಆದಿಯಾದನೆಂಬುದನರಿದ ಸ್ವಯಂಭು ಜ್ಞಾನಿ, ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣನೊಬ್ಬನೆ.
————–

ಅರಗಿನ ದೇಗುಲದಲ್ಲಿ ಒಂದು ಉರಿಯ ಲಿಂಗವ ಕಂಡೆ. ಮತ್ತೆ ದೇವರ ಪೂಜಿಸುವರಾರೂ ಇಲ್ಲ. ಉತ್ತರಾಪಥದ ದಶನಾಡಿಗಳಿಗೆ, ಸುತ್ತಿಮುತ್ತಿದ ಮಾಯೆ ಎತ್ತಲಿಕೆ ಹೋಯಿತ್ತು ? ಮರನೊಳಗಣ ಕಿಚ್ಚು ಮರನ ಸುಟ್ಟುದ ಕಂಡೆ ! ಗುಹೇಶ್ವರನೆಂಬ ಲಿಂಗ ಅಲ್ಲಿಯೆ ನಿಂದಿತ್ತು
————–

ಅರಿವನರಿದು ಮರಹ ಮರೆದು, ಸಂಕಲ್ಪ ಸಂಶಯವಳಿದ ನಿಲವನು, ಅರಿದ ಪರಿ ಎಂತು ಹೇಳಾ ? ಅರಿದೆನೆಂದಡೆ ಜ್ಞಾನಕ್ಕೆ ದೂರ, ಮರೆದೆನೆಂದಡೆ ಮನಕ್ಕೆ ದೂರ. ನಿರ್ಭಾವದ ಹೊಲಿಗೆಯಲ್ಲಿ ಭಾವಸಂಕಲ್ಪ ಬಿಡದು. ನಮ್ಮ ಗುಹೇಶ್ವರಲಿಂಗದಲ್ಲಿ ಮನಮಗ್ನಯೋಗ, ನಿನಗೆಂತು ಸಾಧ್ಯವಾಯಿತ್ತು ಹೇಳಾ ಸಿದ್ಧರಾಮಯ್ಯಾ ?
————–

ಅರಿದರಿದು ಅರಿವು ಬಂಜೆಯಾಯಿತ್ತು. ಮರೆ ಮರೆದು ಮರಹು ಬಂಜೆಯಾಯಿತ್ತು. ಗುಹೇಶ್ವರನೆಂಬ ಶಬ್ದ ಸಿನೆ ಬಂಜೆಯಾಯಿತ್ತು.
————–

ಅಂಗವೆಂಬ ಸಂಸಾರದೊಳಗೆ ಸವೆದವರೆಲ್ಲರೂ ಶಿವನನರಿವರೆ ? ಮನವೆಂಬ ಸಂಕಲ್ಪದ ಕುಣಿಕೆಗೊಳಗಾದವರೆಲ್ಲರೂ ಮಾಯದ ಹೊಡೆಗಿಚ್ಚ ಗೆಲ್ಲಬಲ್ಲರೆ ? ಗುಹೇಶ್ವರಲಿಂಗದಲ್ಲಿ ಸರ್ವಸಂದೇಹವ ಕಳೆದಿಪ್ಪ ಚನ್ನಬಸವಣ್ಣಂಗೆ ನಮೋ ನಮೋ ಎಂಬೆನು.
————–

ಅಯ್ಯಾ ನೀನೆನಗೆ ಗುರುವಪ್ಪಡೆ, ನಾ ನಿನಗೆ ಶಿಷ್ಯನಪ್ಪಡೆ, ಎನ್ನ ಕರಣಾದಿ ಗುಣಂಗಳ ಕಳೆದು, ಎನ್ನ ಕಾಯದ ಕರ್ಮವ ತೊಡೆದು, ಎನ್ನ ಪ್ರಾಣನ ಧರ್ಮವ ನಿಲಿಸಿ, ನೀನೆನ್ನ ಕಾಯದಲಡಗಿ, ನೀನೆನ್ನ ಪ್ರಾಣದಲಡಗಿ ನೀನೆನ್ನ ಭಾವದಲಡಗಿ, ನೀನೆನ್ನ ಕರಸ್ಥಲಕ್ಕೆ ಬಂದು ಕಾರುಣ್ಯವ ಮಾಡಾ ಗುಹೇಶ್ವರಾ
————–

ಅಯ್ಯ ! ಸಮಸ್ತಧಾನ್ಯಾದಿಗಳಲ್ಲಿ, ಸಮಸ್ತ ಫಲಾದಿಗಳಲ್ಲಿ, ಸಮಸ್ತಪುಷ್ಪಪತ್ರಾದಿಗಳಲ್ಲಿ ಮಧುರ, ಒಗರು, ಕ್ಷಾರ, ಆಮ್ಲ, ಕಹಿ, ಲವಣ ಮೊದಲಾದ ಸಮಸ್ತಪರಮಚಿದ್ರಸವಡಗಿರ್ಪಂತೆ, ಷೋಡಶಮದಗಜದಂತರಂಗದ ಮಧ್ಯದಲ್ಲಿ ಸಮಸ್ತ ವೈರಾಗ್ಯ, ತಿರಸ್ಕಾರಸ್ವರೂಪ ಮಹಾ [ಅ]ಜ್ಞಾನವಡಗಿರ್ಪಂತೆ, ಚಂದ್ರಕಾಂತದ ಶಿಲಾಮಧ್ಯದಲ್ಲಿ ಚಿಜ್ಜಲವಡಗಿರ್ಪಂತೆ, ಶಿಶುಗಳು `ಕಂಡ ಕನಸು’ ತಂದೆ ತಾಯಿಗಳಿಗೆ ಕಾಣಿಸಿದಂತೆ, ಕರವೀರ, ಸುರಹೊನ್ನೆ, ಜಾಜಿ, ಬಕುಳ, ಪಾದರಿ, ಪಾರಿಜಾತ, ಮೊಲ್ಲೆ, ಮಲ್ಲಿಗೆ, ತಾವರೆ, ನೈದಿಲೆ, ಸಂಪಿಗೆ, ದವನ, ಪಚ್ಚೆ, ಕಸ್ತೂರಿ, ಮರುಗ, ಬಿಲ್ವ ಮೊದಲಾದ ಪುಷ್ಪ ಪತ್ರಾದಿಗಳಲ್ಲಿ ಮಹಾಸದ್ವಾಸನಾ ಸ್ವರೂಪವಾದ ಪರಿಮಳವಡಗಿರ್ಪಂತೆ, ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯವೆಂಬ ದಶವಾಯುಗಳ ಮಧ್ಯದಲ್ಲಿ ಭ್ರಮರನಾದ, ವೀಣಾನಾದ, ಘಂಟಾನಾದ, ಭೇರಿನಾದ, ಮೇಘನಾದ, ಪ್ರಣಮನಾದ, ದಿವ್ಯನಾದ, ಸಿಂಹನಾದ, ಶರಭನಾದ, ಮಹಾನಾದಂಗಳಡಗಿರ್ಪಂತೆ, ಸದ್ಭಕ್ತ ಶಿವಶರಣಗಣಂಗಳ ಮಧ್ಯದಲ್ಲಿ ಅಡಗಿರ್ದು, ಜಗದ ಜಡಜೀವರಿಗೆ ಗೋಚರವಿಲ್ಲದಿರ್ಪುದು ನೋಡ ! ಗುಹೇಶ್ವರಲಿಂಗವು, ಚೆನ್ನಬಸವಣ್ಣ
————–

ಅಂದು ನೀ ಬಂದ ಬೆಂಬಳಿಯಲ್ಲಿ ನಾ ಬಂದೆ. ಅಂದಂದಿನ ಸಂದೇಹ ಹರಿಯಿತ್ತು. ನೀ ಭಕ್ತನಾಗಿ ನಾ ಜಂಗಮವಾಗಿ, ಗುಹೇಶ್ವರಲಿಂಗವೆಂಬುದಕ್ಕೆ ಅಂಗವಾಯಿತ್ತು.
————–

ಅಂಗದ ಮೇಲಣ ಲಿಂಗವ ಹಿಂಗಿದಾತನ ಭವಿಯೆಂಬರು, ಅಂಗದ ಮೇಲಣ ಲಿಂಗವು ಇಪ್ಪಾತನ ಭಕ್ತನೆಂಬರು, ಅಂಗದೊಳಗೆ ಬೆರಸಿಪ್ಪ ಲಿಂಗದ ಹೊಲಬನರಿಯದೆ. ಲಿಂಗವಿಲ್ಲದೆ ಒಂದು ಕ್ಷಣ ಒಂದಂಗ ಸುಳಿದುದುಂಟೆ ಜಗದೊಳಗೆ ? ಅಂಗದೊಳಗಣ ಲಿಂಗವನು ಹಿಂಗಿದವರಿಗೆ ಭವಮಾಲೆಯುಂಟು, ಹಿಂಗದವರಿಗೆ ಭವಮಾಲೆಯಿಲ್ಲ ಗುಹೇಶ್ವರಾ.
————–

ಅಂಡಜವೆಂಬ ತತ್ತಿಯೊಡೆದು ಪಿಂಡ ಪಲ್ಲಟವಾಗಿ ಗಂಡಗಂಡರನರಸಿ ತೊಳಲುತ್ತೈದಾರೆ. ಖಂಡಮಂಡಲದೊಳಗೆ ಕಂಡೆನೊಂದು ಚೋದ್ಯವ: ಕಂದನ ಕೈಯ ದರ್ಪಣವ ಪ್ರತಿಬಿಂಬ ನುಂಗಿತ್ತು. ದಿವರಾತ್ರಿಯುದಯದ ಬೆಳಗನು ಕತ್ತಲೆ ನುಂಗಿತ್ತು. ಗುಹೇಶ್ವರನಲ್ಲಿಯೆ ನಿರ್ವಯಲಾಗಿತ್ತು.
————–

ಅಜ್ಞಾನ ಸುಜ್ಞಾನಗಳೆರಡೂ ಶಿವನೆಂದಡೆ ಶಿವಜ್ಞಾನಿಗಳು ಮೆಚ್ಚುವರೆ ? ಶಿವ ಶಕ್ತಿಗಳೆರಡೂ ನೀನೇ ಎಂದಡೆ ಮಹಾನುಭಾವಿಗಳು ಪರಿಣಾಮಿಸುವರೆ ? ತನ್ನ ತಾನಾರೆಂಬುದನರಿಯದೆ, ಅನ್ಯವೆಲ್ಲವೂ ಬೊಮ್ಮವೆಂಬ, ಈ ಕರ್ಮದ ನುಡಿಯ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು ?
————–

ಅಮೃತಸಾಗರದೊಳಗಿರ್ದು ಆಕಳ ಚಿಂತೆ ಏಕೆ ? ಮೇರುಮಧ್ಯದೊಳಗಿರ್ದು ಜರಗ ತೊಳೆವ ಚಿಂತೆ ಏಕೆ ? ಗುರುವಿನೊಳಗಿರ್ದು ತತ್ವವಿದ್ಯೆಯ ಚಿಂತೆ ಏಕೆ ? ಪ್ರಸಾದದೊಳಗಿರ್ದು ಮುಕ್ತಿಯ ಚಿಂತೆ ಏಕೆ ? ಕರಸ್ಥಲದೊಳಗೆ ಲಿಂಗವಿರ್ದ ಬಳಿಕ, ಮತ್ತಾವ ಚಿಂತೆ ಏಕೆ ಹೇಳಾ ಗುಹೇಶ್ವರಾ ?
————–

ಅಂಗಕ್ಕೆಂದಡೆ ಹಿರಿಯ ಹರಿವಾಣವ ತುಂಬಿ ಬೋನವ ತಾ ಎಂಬರು. ಲಿಂಗಕ್ಕೆಂದಡೆ ಚಿಕ್ಕ ಗಿಣ್ಣಿಲು ತುಂಬಿ ಬೋನವ ತಾ ಎಂಬರು. ಅಂಗವ ಹಿರಿದು ಮಾಡಿ ಲಿಂಗವ ಕಿರಿದು ಮಾಡಿ ಮನೆಯಲ್ಲಿ ಮಡಕೆ ತುಂಬಿ ಬೋನವ ಮಾಡಿ, ಚಿಕ್ಕ ಕುಡಿಕೆ ಗಿಣ್ಣಿಲು ಲಿಂಗಕ್ಕೆ ಬೋನವ ಹಿಡಿವ ಈ ಮಡಕೆಮಾರಿಗಳನೇನೆಂಬೆ ಗುಹೇಶ್ವರಾ.
————–

ಅನಾದಿಯಲೊಬ್ಬ ಶರಣ; ಆಹ್ವಾನ ವಿಸರ್ಜನವಿಲ್ಲದ ಪರತತ್ವವ ಸ್ಥಾಪಿಸಿ ಪ್ರತಿಷ್ಠೆಯ ಮಾಡುವಲ್ಲಿ ಷಡುವರ್ಣಾತ್ಮಕ ಮೃಗಿ ಹುಟ್ಟಿದಳು ನೋಡಾ ! ಆ ಮೃಗಿಯೊಳು ಪಂಚಾಂಗ ಪಂಚತಂಡದವರೆಲ್ಲ ಹುಟ್ಟಿ ವರ್ತಿಸಿ ಲಯವಾಗಿ, ಮತ್ತೆ ಪಲ್ಲವಿಸುತಿರ್ದರು ನೋಡಾ ! ಆ ಪರತತ್ವದ ಲೀಲೆಯನು ಆ ಶರಣನೆ ಬಲ್ಲ ಗುಹೇಶ್ವರಾ
————–

ಅಯ್ಯ ಸದಾಚಾರಸದ್ಭಕ್ತಿಯಿಲ್ಲದ ಗುರುವು ನರಜೀವಿ. ಆತನಿಂದ ಹುಟ್ಟಿದ ಲಿಂಗಾಂಗವೆರಡು ಜಡಜೀವಿ. ಅವರಿಬ್ಬರಲ್ಲಿ ಹೊಕ್ಕು ಕೊಟ್ಟು ಕೊಂಬುವ ಜಂಗಮ ಭೂತಪ್ರಾಣಿ. ಈ ನರಜೀವಿ, ಜಡಜೀವಿ, ಭೂತಪ್ರಾಣಿಗಳಿಗೆ ಕೊಟ್ಟುಕೊಂಬ ಭಕ್ತಂಗೆ ಏಳನೆಯ ಪಾತಕ ಬಿಡದು ಕಾಣಾ. ಗುಹೇಶ್ವರಲಿಂಗದ ಸದಾಚಾರಸದ್ಭಕ್ತಿಯಿಂದಲ್ಲದೆ ಮುಕ್ತಿಯಿಲ್ಲ ನೋಡಾ ಚೆನ್ನಬಸವಣ್ಣ.
————–

ಅಯ್ಯ ! ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯವೆಂಬ ದಶವಾಯು ಪ್ರಾಣಗುಣಂಗಳ ನಷ್ಟವ ಮಾಡಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾನ್ಯ, ಧಾರಣ, ಸಮಾಧಿಯೆಂಬ ಹಠಯೋಗ ಜಡಶೈವಮಾರ್ಗವನುಳಿದು, ನಿಭ್ರ್ರಾಂತ, ನಿಶ್ಚಿಂತ, ನಿರ್ಗುಣಾನಂದಲೀಲೆಯನರಿದು, ಹಿಂದೆ ಹೇಳಿದ ಸದ್ಭಕ್ತ_ಮಹೇಶ_ಪ್ರಸಾದಿಸ್ಥಲವ ಅಂಗವ ಮಾಡಿಕೊಂಡು ಸರ್ವಾಂಗಲೋಚನಮೂರ್ತಿಯಾಗಿ ಪ್ರಭಾವಿಸುವ ನಿಜಪ್ರಾಣಲಿಂಗಿಯಂತರಂಗದಲ್ಲಿ ಚಿನ್ಮಯ ಸ್ವರೂಪಲೀಲೆಯಿಂ ಸಮಸ್ತ ತತ್ತ್ವಾನುಭಾವವನೊಳಗು ಮಾಡಿಕೊಂಡು ಹದಿನಾಲ್ಕು ಸ್ಥಲಂಗಳ ಗರ್ಭೀಕರಿಸಿಕೊಂಡು ಐದು ಸಾವಿರದ ನೂರ ಎಂಬತ್ತುನಾಲ್ಕು ಮಂತ್ರಮಾಲೆಗಳ ಪಿಡಿದುಕೊಂಡು ಇಪ್ಪತ್ತುನಾಲ್ಕು ಸಕೀಲಗರ್ಭದಿಂ, ಬಂಗಾರ ಲೋಹವನೊಳಕೊಂಡಂತೆ, ತನ್ನ ಸೋಂಕಿದವರೆಲ್ಲ ತನ್ನಂತೆಯೆಂಬ ಗುರುವಚನೋಕ್ತಿಪ್ರಮಾಣದಿಂದೆ ಶಬ್ದದೊಳಗೆ ನಿಃಶಬ್ದವಡಗಿರ್ಪ ಹಾಂಗೆ ಏಕಸ್ವರೂಪಿನಿಂದೆ ಯಜನಸ್ವರೂಪಮೂರ್ತಿ ಜಂಗಮಲಿಂಗವಾಗಿ ನೆಲಸಿರ್ಪುದು ನೋಡ ! ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು ಚೆನ್ನಬಸವಣ್ಣ.
————–

ಅಂಡಜ ಒಡೆಯದರಿಂದ ಮುನ್ನ, ದ್ವೀಪಾದ್ವೀಪವಿಲ್ಲದ ಮುನ್ನ, ಅನಲಪವನರಿಲ್ಲದ ಮುನ್ನ, ರವಿಚಂದ್ರರಿಲ್ಲದ ಮುನ್ನ, ಗುಹೇಶ್ವರಲಿಂಗವಲ್ಲಿಂದ ಮುನ್ನ.
————–

ಅಟ್ಟಿ ಮುಟ್ಟಲಿಲ್ಲ, ಮುಟ್ಟಿ ಮರಳಲಿಲ್ಲ, ಏನೆಂಬೆ ಲಿಂಗವೆ, ಎಂತೆಂಬೆ ಲಿಂಗಯ್ಯಾ ? ನಿಜವನರಿದ ಬಳಿಕ ಮರಳಿ ಹುಟ್ಟಲಿಲ್ಲ, ಕಾಣಾ ಗುಹೇಶ್ವರಾ.
————–

ಅಂಗೈಯ ಲಿಂಗದಲ್ಲಿ ಕಂಗಳ ನೋಟ ಸ್ವಯವಾದ ಇರವ ನೋಡಾ ! ತನ್ನ ಸ್ವಾನುಭಾವದ ಉದಯದಿಂದ ತನ್ನ ತಾನರಿದ ನಿಜಶಕ್ತಿಯ ನೋಡಾ ! ಭಿನ್ನವಿಲ್ಲದರಿವು, ಮನ್ನಣೆಯ ಮಮಕಾರವ ಮೀರಿದ ಭಾವ ! ತನ್ನಿಂದ ತಾನಾದಳು ! ನಮ್ಮ ಗುಹೇಶ್ವರಲಿಂಗದಲ್ಲಿ ಸ್ವಯಲಿಂಗವಾದ ಮಹಾದೇವಿಯಕ್ಕಗಳ ನಿಲವಿಂಗೆ ನಮೋ ನಮೋ ಎನುತಿರ್ದೆನು ಕಾಣಾ ಚನ್ನಬಸವಣ್ಣ.
————–

ಅಂಗದ ಕಳೆಯಲೊಂದು ಲಿಂಗವ ಕಂಡೆ. ಲಿಂಗದ ಕಳೆಯಲೊಂದು ಅಂಗವ ಕಂಡೆ. ಅಂಗ ಲಿಂಗ[ದ]ಸಂದಣಿಯನರಸಿ ಕಂಡೆ, ನೋಡಿರೆ. ಇಲ್ಲಿಯೆ ಇದಾನೆ ಶಿವನು ! ಬಲ್ಲಡೆ ಇರಿಸಿಕೊಳ್ಳಿರೆ; ಕಾಯವಳಿಯದ ಮುನ್ನ ನೋಡಬಲ್ಲಡೆ. ಗುಹೇಶ್ವರಲಿಂಗಕ್ಕೆ ಬೇರೆಠಾವುಂಟೆ ಹೇಳಿರೆ ?
————–

ಅಲ್ಪಜ್ಞಾನಿ ಪ್ರಕೃತಿ ಸ್ವಭಾವಿ, ಮಧ್ಯಮಜ್ಞಾನಿ ವೇಷಧಾರಿ, ಅತೀತಜ್ಞಾನಿ ಆರೂಢ. ಆರೂಢನಾದರೂ ಅರಿಯಬಾರದಯ್ಯಾ. ಜ್ಞಾನವನರಿಯದಾತ ಅಜ್ಞಾನಿ, ನಾಮನಷ್ಟ. ಈ ಚತುರ್ವಿಧದೊಳಗೆ ಆವಂಗವೂ ಇಲ್ಲ, ಗುಹೇಶ್ವರಾ_ನಿಮ್ಮ ಶರಣ.
————–

ಅಂಬುಧಿಯೊಳಗಾದ ನದಿಗಳು ಮರಳುವುವೆ ? ಉರಿಯೊಳಗಾದ ಕರ್ಪುರ ರೂಪಿಂಗೆ ಬಪ್ಪುದೆ ? ಮರುತನೊಳಗಾದ ಪರಿಮಳ ಲೇಪನಕ್ಕೆ ಬಪ್ಪುದೆ ? ಲಿಂಗವನರಿದು ಲಿಂಗೈಕ್ಯವಾದ ಶರಣ ಮರಳಿ ಹುಟ್ಟುವನೆ ಗುಹೇಶ್ವರಾ ?
————–

ಅಪ್ಪುವಿನ ಬಾವಿಗೆ ತುಪ್ಪದ ಘಟ; ಸಪ್ಪಗೆ, ಸಿಹಿ ಎಂಬ ಎರಡಿಲ್ಲದ ರುಚಿ, ಪರುಷ ಮುಟ್ಟದ ಹೊನ್ನು! ಕರೆಸದ ಬೊಜಗನು ಬೆರಸದೆ ಬಸುರಾಯಿತ್ತ ಕಂಡೆನಾಹಾ! ಅರುವಿನ ಆಪ್ಯಾಯನ ಮರಹಿನ ಸುಖವೊ! ಇದು ಕಾರಣ ಮೂರು ಲೋಕವಳಿಯಿತ್ತು ಗುಹೇಶ್ವರಾ.
————–

ಅಯ್ಯ ತನುತ್ರಯಂಗಳು, ಜೀವತ್ರಯಂಗಳು, ಆತ್ಮತ್ರಯಂಗಳು, ಅವಸ್ಥಾತ್ರಯಂಗಳು, ಗುಣತ್ರಯಂಗಳು, ಮನತ್ರಯಂಗಳು, ತಾಪತ್ರಯಂಗಳು, ಕಾಲತ್ರಯಂಗಳು, ಕರ್ಮತ್ರಯಂಗಳು, ಭಾವತ್ರಯಂಗಳು, ಮಲತ್ರಯಂಗಳು, ಕರಣತ್ರಯಂಗಳು ಮೊದಲಾದ ಪ್ರವೃತ್ತಿಮಾರ್ಗವನುಳಿದು, ಹಿಂದೆ ಹೇಳಿದ ಸದ್ಭಕ್ತ_ಮಹೇಶ್ವರಸ್ಥಲದಲ್ಲಿ ನಿಂದು_ ಅಷ್ಟಾವಧಾನ ಅವಿರಳಾನಂದಮೂರ್ತಿಯಾಗಿ ಪ್ರಕಾಶಿಸುವ ನಿಜಪ್ರಸಾದಿಯಂತರಂಗದಲ್ಲಿ ಚಿತ್ಘನ ಸ್ವರೂಪವಲೀಲೆಯಿಂ ಅಂತರಂಗದಲ್ಲಿ ಅಂಗತತ್ತ್ವ, ಲಿಂಗತತ್ತ್ವ, ಶಿವತತ್ತ್ವ, ಪರತತ್ತ್ವ ಮೊದಲಾದ ಸಮಸ್ತ ತತ್ತ್ವಂಗಳನೊಳಕೊಂಡು, ಹದಿನಾರು ಸ್ಥಲಂಗಳ ಗರ್ಭೀಕರಿಸಿಕೊಂಡು, ನಾಲ್ಕು ಸಾವಿರದ ಮುನ್ನೂರಿಪ್ಪತ್ತು ಮಂತ್ರಮಾಲಿಕೆಗಳ ಪಿಡಿದುಕೊಂಡು ಇಪ್ಪತ್ತುನಾಲ್ಕು ಸಕೀಲಗರ್ಭದಿಂ ಪಾದೋದಕ ಪ್ರಸಾದವ ಕೊಂಡ ಅಂಗ_ಮನ_ಪ್ರಾಣ_ಭಾವ_ಇಂದ್ರಿಯಂಗಳೆಲ್ಲ ಪಾದೋದಕ ಪ್ರಸಾದಮಯವೆಂಬ ಹರಗುರುವಾಕ್ಯದಿಂ ಚಿನ್ನಬಣ್ಣ ಪ್ರಕಾಶದ ಹಾಂಗೆ ಭಿನ್ನ ಭಾವವಿಲ್ಲದೆ ಏಕರೂಪಿನಿಂದ ನಿರೀಕ್ಷಣಾಮೂರ್ತಿ ಶಿವಲಿಂಗವಾಗಿ ನೆಲಸಿರ್ಪುದು ನೋಡ ! ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು ಚೆನ್ನಬಸವಣ್ಣ.
————–

ಅಯ್ಯ ಸತ್ಕ್ರಿಯಾಸಮ್ಯಜ್ಞಾನವುಂಟಾದಡೆ ಸದಾಚಾರಸದ್ಭಕ್ತಿ ಉಂಟೆಂಬೆ. ಸದಾಚಾರ ಸದ್ಭಕ್ತಿ ಸತ್ಕ್ರಿಯಾ ಸಮ್ಯಜ್ಞಾನ [ಸತ್ಯ] ನಡೆನುಡಿ ಒಂದಾದಡೆ ಆದಿ_ಅನಾದಿಯಿಂದತ್ತತ್ತ ಮೀರಿ ತೋರುವ, ಪರಿಪೂರ್ಣ ಪರಮಾನಂದ ಪರಬ್ರಹ್ಮ ಗುರುಲಿಂಗಜಂಗಮವೆಂಬೆ ನೋಡಾ. ಇಂತು_ಸದಾಚಾರ, ಸದ್ಭಕ್ತಿ, ಸತ್ಕ್ರಿಯಾ, ಸಮ್ಯಜ್ಞಾನ, ಸತ್ಯನಡೆ ನುಡಿಯಿಲ್ಲವಾದಡೆ ಗುಹೇಶ್ವರಲಿಂಗಕ್ಕೆ ದೂರ ಕಾಣಾ ಚೆನ್ನಬಸವಣ್ಣ.
————–

ಅತ್ತಲಿಂದ ಒಂದು ಪಶುವು ಬಂದು, ಇತ್ತಲಿಂದ ಒಂದು ಪಶುವು ಬಂದು, ಒಂದರ ಮೋರೆಯನೊಂದು ಮೂಸಿ ನೋಡಿದಂತೆ, ಗುರುವು ಗುರುವಿನೊಳಗೆ ಸಂಬಂಧವಿಲ್ಲ ಶಿಷ್ಯರು ಶಿಷ್ಯರೊಳಗೆ ಸಂಬಂಧವಿಲ್ಲ, ಭಕ್ತರಲಿ ಭಕ್ತರಲಿ ಸಂಬಂಧವಿಲ್ಲ. ಈ ಕಲಿಯುಗದೊಳಗುಪದೇಶವ ಮಾಡುವ ಹಂದಿಗಳಿರಾ ನೀವು ಕೇಳಿರೊ, ಗಂಡಗೆ ಗುರುವಾದಡೆ ಹೆಂಡತಿಗೆ ಮಾವನೆ ? ಹೆಂಡತಿಗೆ ಗುರುವಾದಡೆ ಗಂಡಂಗೆ ಮಾವನೆ ? ಗಂಡ ಹೆಂಡತಿಗೆ ಗುರುವಾದಡೆ ಇವರಿಬ್ಬರೇನು ಒಡಹುಟ್ಟಿದರೆ ? ಈ ಭೇದವನರಿಯದೆ ದೀಕ್ಷೆ ಕಾರಣವ ಮಾಡುವಾತ ಗುರುವಲ್ಲ. ಈ ಕಳೆಯ ಕುಲವನರಿಯದಾತ ಶಿಷ್ಯನಲ್ಲ. ಈ ಭೇದವನರಿದು ಕಾರಣವ ಮಾಡುವ ಗುರುಶಿಷ್ಯ ಸಂಬಂಧವೆಲ್ಲ ಉರಿ ಕರ್ಪುರ ಸಂಯೋಗದಂತಹುದು ಕಾಣಾ ಗುಹೇಶ್ವರಾ.
————–

ಅತಿರಥ ಸಮರಥರೆನಿಪ ಹಿರಿಯರು, ಮತಿಗೆಟ್ಟು ಮರುಳಾದರಲ್ಲಾ ! ದೇವಸತ್ತ ಬ್ರಹ್ಮ ಹೊತ್ತ, ವಿಷ್ಣು ಕಿಚ್ಚ ಹಿಡಿದ. ಗಂಗೆಗೌರಿಯರಿಬ್ಬರು ಬರು ಮುಂಡೆಯರಾದರು. ಇದ ಕಂಡು ಬೆರಗಾದೆ ಗುಹೇಶ್ವರಾ.
————–

ಅಹಂಕಾರವನೆ ಮರೆದು, ದೇಹಗುಣಂಗಳನೆ ಜರೆದು, ಇಹ ಪರವು ತಾನೆಂದರಿದ ಕಾರಣ, ಸೋಹಂ ಭಾವ ಸ್ಥಿರವಾಯಿತ್ತು. ಸಹಜದುದಯದ ನಿಲವಿಂಗೆ, ಮಹಾಘನಲಿಂಗದ ಬೆಳಗು ಸ್ವಾಯತವಾದ ಕಾರಣ ಗುಹೇಶ್ವರಾ ನಿಮ್ಮ ಶರಣನು ಉಪಮಾತೀತನು.
————–

ಅಷ್ಟದಳಕಮಲದ ಮೇಲಿಪ್ಪ ನಿಶ್ಶೂನ್ಯನ ಮರ್ಮವನರಿಯದೆ, ಪ್ರಾಣಲಿಂಗವೆಂದೆಂಬರು, ಸಂತೆಯ ಸುದ್ದಿಯ ವಂಚಕರು. ಅಂಗದ ಆಪ್ಯಾಯನಕ್ಕೆ ಲಿಂಗವನರಸುವ, ಭಂಗಿತರನೇನೆಂಬೆ ಗುಹೇಶ್ವರಾ.
————–

ಅಂಗದ ಕಳೆ ಲಿಂಗದಲ್ಲಿ ಅರತ ಬಳಿಕ, ಅಂಗವೆಂಬ ಶಂಕೆಯಿಲ್ಲ ನೋಡಾ ಶರಣಂಗೆ. ಪ್ರಾಣದ ಕಳೆ ಅರಿವಿನಲ್ಲಿ ಅರತ ಬಳಿಕ, ಶಬ್ದಸಂದಣಿಗೆ ಹಂಗಿಲ್ಲ ನೋಡಾ. ಶರಣ ನಡೆದಡೆ ನಿರ್ಗಮನಿ ನುಡಿದಡೆ ನಿಶ್ಶಬ್ದಿ ! ಗುಹೇಶ್ವರನ ಶರಣಂಗೆ ಕುರುಹಿಲ್ಲ ಕೇಳಾ ಎಲೆ ಅವ್ವಾ.
————–

ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ ಯೋಗದ ಹೊಲಬ ನೀನೆತ್ತ ಬಲ್ಲೆ? ಕದಳಿಯ ಬನವ ನಿನ್ನಲ್ಲಿ ನೀನು ತಿಳಿದು ನೋಡು, ಮದ ಮತ್ಸರ ಬೇಡ. ಹೊದಕುಳಿಗೊಳಬೇಡ. ಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ ನಿಲ್ಲೊ.
————–

ಅಂಗದಲ್ಲಿ ಅಳವಟ್ಟಿಪ್ಪ ಆಚಾರವೆ ಲಿಂಗವೆಂದರಿದನು, ಮನದಲ್ಲಿ ಬೆಳಗುತ್ತಿಪ್ಪ ಅರಿವೆ ಜಂಗಮವೆಂದರಿದನು, ಈ ಎರಡರ ಸಂಗವೆ ತಾನೆಂದರಿದನು ಮಾಡುವ ದಾಸೋಹವೆ ಲಿಂಗಜಂಗಮವೆಂದರಿದನು ನಮ್ಮ ಗುಹೇಶ್ವರಲಿಂಗದಲ್ಲಿ, ಸಂಗನಬಸವಣ್ಣನ ನಿಲವನರಿಯಬೇಕು ಕೇಳಾ ಚಂದಯ್ಯಾ.
————–

ಅಯ್ಯ, ಆಚಾರವಿಲ್ಲದ ಜಂಗಮದಲ್ಲಿ ಪಾದೋದಕಪ್ರಸಾದವ ಕೊಳಲಾಗದು. ಆಚಾರವಿಲ್ಲದ ಜಂಗಮ[ವ] ದೇವರೆಂದು ಭಾವಿಸಲಾಗದು. `ಆಚಾರಶೂನ್ಯಂ ಚ ಭೂತಪ್ರಾಣೀ’ ಎಂದುದಾಗಿ ಆಚಾರವಿಲ್ಲದ ಅನಾಮಿಕರ ಕೈಯಲ್ಲಿ ಪಾದೋದಕ ಪ್ರಸಾದ ಉಪದೇಶವ ಕೊಂಡವಂಗೆ ಅಘನಾಸ್ತಿಯಾಗದು, ಮುಂದೆ ಅಘೋರನರಕ ತಪ್ಪದು ಕಾಣಾ ಗುಹೇಶ್ವರಾ.
————–

ಅಂಗ ಮೂವತ್ತಾರರ ಮೇಲೆ ಲಿಂಗ. ನಿಸ್ಸಂಗವೆಂಬ ಕರದಲ್ಲಿ ಹಿಡಿದು ಅಂಗವಿಸಿ, ಅಹುದು ಆಗದು ಎಂಬ ನಿಸ್ಸಂಗದ ಅರ್ಪಣವ ಮಾಡಿ ಸುಸಂಗ ಪ್ರಸಾದವ ಕೊಳಬಲ್ಲವಂಗೆ ಗುಹೇಶ್ವರಾ, ಮುಂದೆ ಬಯಲು ಬಯಲು ಬಟ್ಟ ಬಯಲು !
————–

ಅಂಡವ ಮೇಲು ಮಾಡಿ ಪಿಂಡಿಯಾಗಿ, ಆ ಅಂಡದೊಳಗೆ ನಾಲ್ಕು ಕೈಕರಣ ಅನೇಕ ಉದ್ದವಾದವು ! ಆ ಕೈಕರಣದೊಳಗೊಬ್ಬ ಶರಣ, ದಾಸೋಹಮೆನಲು, ಆ ಕ್ಷಣ ಒಂದು ಸೋಜಿಗ ಮೂಡಿತ್ತ ಕಂಡೆ ಗುಹೇಶ್ವರಾ
————–

ಅಂಬರವಿಲ್ಲದ ಮೇರು, ಅಂಬುಧಿಯಿಲ್ಲದ ಗುಂಪ ತಂದವರಿಲ್ಲದೆ ಬಂದಿತ್ತು, ನಿಜವನೊಳಕೊಂಡಿತ್ತು ಸಾಧನವಿಲ್ಲದ ಓಗರವ ಭಾಜನವಿಲ್ಲದೆ ಗಡಣಿಸಿ ಭೋಜನವಿಲ್ಲದೆ ತೃಪ್ತಿಯಾಯಿತ್ತು ನೋಡಾ. ಕ್ರಿಯಾವಿರಹಿತಯೋಗ ಫಲದಾಯಕ ಹೀನಭಕ್ತಿ, ಆಯತ ಸ್ವಾಯತವರಿಯದೆ ಹೋಯಿತ್ತು ಗುಹೇಶ್ವರಾ.
————–

ಅರಿದಡೆ ಸುಖವಿಲ್ಲ; ಮರದಡೆ ದುಃಖವಿಲ್ಲ ! ಸತ್ತಡೆ ಚೇಗೆಯಿಲ್ಲ; ಬದುಕಿದಡೆ ಆಗಿಲ್ಲವೆಂಬ ! ನಿರ್ಣಯದಲ್ಲಿ ನಿಶ್ಚಯಿಸಿ ನಿಲ್ಲದೆ ! ನಾನು ನೀನೆಂಬ ಉಭಯವಳಿದು ಕೂಡುವ ಯೋಗದ ಹೊಲಬನರಿಯದೆ ! ಬರಿಯ ಮರವೆಯ ಪ್ರೌಡಿsಕೆಯಲ್ಲಿ ಕೆಟ್ಟರಯ್ಯ ಗುಹೇಶ್ವರ.
————–

ಅಪರಿಮಿತ ಕತ್ತಲೆಯೊಳಗೆ ಪರಿಮಿತದ ಬೆಳಗನಿಕ್ಕಿದಡೆ ಬೆಳಕೂ ಅದೆ, ಕತ್ತಲೆಯೂ ಅದೆ ! ಇದೇನು ಚೋದ್ಯವೊ? ಒಂದಕ್ಕೊಂದಂಜದು ! ಆನೆಯೂ ಸಿಂಹವೂ ಒಂದಾಗಿ ಉಂಬುದ ಕಂಡು ಬೆರಗಾದೆನು ಕಾಣಾ _ ಗುಹೇಶ್ವರಾ.
————–

ಅಕ್ಷರದಲಭ್ಯಾಸವ ಮಾಡಿ ಬರೆವ ತೊಡೆವ ಪರಿಯಿನ್ನೆಂತೊ? ಸ್ವರೂಪವೆಂಬುದಾವುದು ನಿರೂಪವೆಂಬುದಾವುದು ಅರಿಯರಾಗಿ, ಆದಿನಿರಾಳ ಮಧ್ಯನಿರಾಳ ಊಧ್ರ್ವನಿರಾಳ ಗುಹೇಶ್ವರ.
————–

ಅರಿದು ಮರೆದು ಬೆರಗು ಹತ್ತಿತ್ತು. ಏನಂದರಿಯದೆ ಅದೆಂತೆಂದರಿಯದೆ ಗುಹೇಶ್ವರಾ ಗುಹೇಶ್ವರಾ ಎನುತ ಅಲ್ಲಿಯೆ ನಿಂದಿತ್ತು
————–

ಅಹುದಹುದು, ಭಕ್ತಿಭಾವದ ಭಜನೆ ಎಂತಿರ್ದುದಂತೆ ಅಂತರಂಗದಲ್ಲಿ ಅರಿವು. ಆ ಅಂತರಂಗದ ಅರಿವಿಂಗೆ ಆಚಾರವೆ ಕಾಯ. ಆಚಾರವೆಂಬ ಕಾಯವಿಲ್ಲದಡೆ ಅರಿವಿಂಗೆ ಆಶ್ರಯವಿಲ್ಲ. ಅರಿವು ಆಚಾರದಲ್ಲಿ ಸಮವೇಧಿಸಿದ ಲಿಂಗೈಕ್ಯನ ಕ್ರಿಯಾಬದ್ಧನೆಂದು ನುಡಿದಡೆ ಪಂಚಮಹಾಪಾತಕ. ನಿನ್ನ ಅರಿವಿಂಗೆ ಆಚಾರವಾಗಿ, ಆಚಾರಕ್ಕೆ ಆಳಾಗಿ ನಮ್ಮ ಗುಹೇಶ್ವರನು ನಿನ್ನ ಕೈವಶಕ್ಕೆ ಒಳಗಾದನು ನಿನ್ನ ಸುಖಸಮಾಧಿಯ ತೋರು, ಬಾರಾ ಸಿದ್ಧರಾಮಯ್ಯ
————–

ಅರಿವಿನಲ್ಲಿ ಉದಯಿಸಿ ಮರಹು ನಷ್ಟವಾಗಿರ್ದ ಶರಣನ ಪರಿಯನರಸಲುಂಟೆ ? ಗತಿಯ ಹೇಳಲುಂಟೆ ? ಶಿಶು ಕಂಡ ಕನಸಿನಂತಿಪ್ಪರು ಗುಹೇಶ್ವರಾ ನಿಮ್ಮ ಶರಣರು !
————–

ಅಂಬರದೊಳಗೊಂದು ಅಡವಿ ಹುಟ್ಟಿತ್ತು. ಆ ಅಡವಿಯೊಳಗೊಬ್ಬ ವ್ಯಾಧನೈದಾನೆ. ಆ ವ್ಯಾಧನ ಕೈಯಲ್ಲಿ ಸಿಕ್ಕಿತ್ತು ಒಂದು ಮೃಗವು. ಆ ಮೃಗವ ಕೊಂದಲ್ಲದೆ ವ್ಯಾಧ ಸಾಯನು ! ಅರಿವು ಬರಿದುಂಟೆ ಗುಹೇಶ್ವರಾ ?
————–

ಅರಿವಿನ ಹೃದಯ ಕಂದೆರೆಯಬೇಕೆಂದು ಗುರುವೆಂದು ಕಲ್ಪಿಸಿಕೊಂಬರಲ್ಲದೆ, ಗುರುವೆಂದೆನಲುಂಟೆ ಶಿಷ್ಯಂಗೆ ? ಶಿಷ್ಯನೆಂದೆನಲುಂಟೆ ಗುರುವಿಂಗೆ ? ಗಮನಾಗಮನ ನಾಸ್ತಿಯಾದ ಲಿಂಗಕ್ಕೆ ಅಂಗವೆಲ್ಲಿಯದು ಹೇಳಾ ಗುಹೇಶ್ವರಾ ?
————–

ಅತ್ತಲಿತ್ತಲು ಕಾಣಲಿಲ್ಲ, ಬಯಲ ಧಾಳಿ ಮುಟ್ಟಿತ್ತಲ್ಲಾ ! ಸರಳಮಂಡಲ ಮಂಜಿನ ಕಾಳಗತ್ತಲೆ ಕವಿಯಿತ್ತು. ರವಿಯ ರಥದಚ್ಚು ಮುರಿಯಿತ್ತು ! ಶಶಿ ಅಂಶದ ನಿಲವನು ರಾಯ (ರಾಹು ?) ಗೆದ್ದುದ ಕಂಡು ಹಿರಿಯರು ಹೊಲಬುಗೆಟ್ಟರು ಗುಹೇಶ್ವರಾ.
————–

ಅರಿವಿನ ಬಲದಿಂದ ಕೆಲಬರು ಅರಿಯದವರ ಗೆಲಬೇಕೆಂದು, ಬರುಮಾತಿನ ಉಯ್ಯಲೆಯನೇರಿ, ಒದೆದು ಒರಲಿ ಕೆಡೆವ ದರಿದ್ರರು ! ಅರಿವು ತೋರದೆ ಇರಬೇಕು_ಕಾಯನಿರ್ಣಯ ನಿಃಪತಿಯೆಂಬಾತನು. ಸೋಂಕಿನ ಸೋಜಿಗವೆಂಬ ಪರಿಣತೆ ಫಲಿಸಬೇಕು, ಅರಿವು ತೋರದೆ ಎರಡೆಂಬ ಭಿನ್ನವೇಷವ ತೊಟ್ಟು ಡಂಬಕವ ನುಡಿದೆಹೆವೆಂಬ ಉದ್ದಂಡರ ಗುಹೇಶ್ವರ ಕಂಡರೆ ಕನಲುವ.
————–

ಅವಸ್ಥಾತ್ರಯಮಂ ಬಿಟ್ಟು ಇಷ್ಟಲಿಂಗದ ಗರ್ಭದಲ್ಲಿ ಕಾಯವ ನಿಕ್ಷೇಪವಂ ಮಾಡಿದ ಬಳಿಕ ಕಾಲನ ಭಯವಿಲ್ಲ. ನೇತ್ರದಲ್ಲಿರ್ದ ಪ್ರಾಣಲಿಂಗದ ಮೇಲೆ ಮನವ ನಿಲಿಸಿದ ಬಳಿಕ ಕಾಮನ ಭಯವಿಲ್ಲ. ಏಕಾಂತ ಸ್ಥಾನವಾಗಿ, ಅಂತರಂಗದ ಭಾವ ಜ್ಯೋತಿರ್ಲಿಂಗದಲ್ಲಿ ಅರಿವು ಸಂಧಾನದಿಂ ಸಮರಸವಾಗಲು, ಕರ್ಮದ ಭಯವಿಲ್ಲ. ಈ ತ್ರಿಲಿಂಗ ಸಂಬಂಧದಿಂದ ಕಾಲಕಾಮಕರ್ಮವನೊತ್ತಿ ಮೆಟ್ಟಿ ನಿಲ್ಲದೆ, ವಿಷಯಸುಖಕ್ಕೆ ಮೆಚ್ಚಿ ಆ ಮೂವರ ಕಾಲ ಕೆಳಗೆ ಬಿದ್ದು, ಮಹಾದುಃಖಕ್ಕೊಳಗಾದರು, ನರರು. ಈ ವಿಷಯಗಾಳಿ ಸೋಂಕಲು ಹರಿ ಹತ್ತು ಭವವೆತ್ತಿದ. ಅಜ 21 ಭವವೆತ್ತಿ ಶಿರ ಕಳಕೊಂಡ. ಇಂದ್ರನ ಮೈ ಕೆಟ್ಟಿತ್ತು, ಚಂದ್ರ ಕ್ಷಯ ರೋಗಿಯಾದ. ದಿವಸೇಂದ್ರ ಕಿರಣ ನಷ್ಟವಾದ. ಮುನೀಂದ್ರರ್ನಷ್ಟವಾಗಿ ಮಡಿದರು. ಮನು ಮಾಂಧಾತರು ಮಂದಮತಿಗಳಾದರು. ದೇವ ದಾನವ ಮಾನವರು ಮಡಿದರು. ಇದ ನೋಡಿ ನಮ್ಮ ಶರಣರು, ವಿಷಯಗಾಳಿ ತಮ್ಮ ಸೋಕೀತೆಂದು ಶಾಂಭವಪುರದಲ್ಲಿಯೆ ನಿಂದು, ನಿರ್ವಿಷಯಾಸ್ತ್ರದಲ್ಲಿ ವಿಷಯಗಾಳಿಯ ಛೇದಿಸಿ ಜಯಿಸಿ ಅಕ್ಷಯ ಸುಖಿಗಳಾದರು ನೋಡಾ ಗುಹೇಶ್ವರಲಿಂಗದಲ್ಲಿ.
————–

ಅಟ್ಟಿತ್ತೊಂದು, ಓಡಿತ್ತೊಂದು, ಮುಟ್ಟಿ ಹಿಡಿಯಿತ್ತೊಂದು. ಅಟ್ಟಾಟಿಕೆಯಲಿ ಅರಿದಾವುದು ! ಹಸು ಮಾಣಿಕ್ಯವ ನುಂಗಿ ಬ್ರಹ್ಮೇತಿಗೊಳಗಾಯಿತ್ತು. ಮೂರ್ತಿಯಾದುದೆ ಅಮೂರ್ತಿಯಾದತ್ತು, ಅಮೂರ್ತಿಯಾದುದೆ ಮೂರ್ತಿಯಾದತ್ತು. ಇದನೆಂತು ತೆಗೆಯಬಹುದು ? ಇದನೆಂತು ಕೊಳಬಹುದು ! ಅಗಮ್ಯ, ಅಗೋಚರ. ಕಾಯವು ಲಿಂಗದೊಳಡಗಿ, ಪ್ರಾಣವು ಲಿಂಗದೊಳಗಿದ್ದು, ನೀನೆನ್ನ ಕರಸ್ಥಲದೊಳಗೆ ಮೂರ್ತಿಗೊಂಡು, ಕಾರುಣ್ಯವ ಮಾಡು ಗುಹೇಶ್ವರಾ.
————–

ಅಂಜಬೇಡ ಅಳುಕಬೇಡ; ಹೋದವರಾರು ಇದ್ದವರಾರು ? ಎಲೆ ಮರುಳೆ ! ಒಂದು ಮುಖದಲ್ಲಿಪ್ಪ ದೇವನೊಬ್ಬನೆ. ಹಲವು ಮುಖದಲ್ಲಿಪ್ಪ ದೇವನೊಬ್ಬನೆ. ನಾಮ ಹಲವಲ್ಲದೆ ಕಾರ್ಯ ಒಂದೇ ನೋಡಾ ! ಮನದೊಳಗಣ ಘನವು ತನುವನಗಲುವುದೆ ? ಗುಹೇಶ್ವರಲಿಂಗದಲ್ಲಿ ವಿಯೋಗಕ್ಕೆ ತೆರಹಿಲ್ಲ ಕೇಳಾ, ಸಂಗನಬಸವಣ್ಣ.
————–

ಅಯ್ಯ ! ನಿರವಯಶೂನ್ಯಲಿಂಗದೇಹಿ ನಿಜಕರುಣಪ್ರಸಾದಾತ್ಮನು ಆ ನಿರವಯ ಶೂನ್ಯಲಿಂಗದಾಚಾರದಲ್ಲಿಯೆ ನಡೆವನಯ್ಯ ! ಲೋಕವರ್ತಕ ಲೋಕಚಾತುರ್ಯಕ್ಕೆ, ಲೋಕವ್ಯವಹರಣೆಯನನುಕರಿಸಿ ನಡೆವನಲ್ಲ ! ನಿಜಶಿವಜ್ಞಾನ_ನಿಜಶಿವಕ್ರಿಯಾಪ್ರಕಾಶವ ಸಂಬಂಧಿಸಿಕೊಂಡು ಸರ್ವಾಂಗವು ನಿರವಯಶೂನ್ಯಲಿಂಗರೂಪವಾಗಿ ಲಿಂಗಕ್ಕೆ ಲಿಂಗವೆ ಭಾಜನ ಪದಾರ್ಥ-ಪ್ರಸಾದ_ಪರಿಣಾಮವಾಗಿರಬಲ್ಲಡೆ ಅದು ಲಿಂಗೈಕ್ಯ ನೋಡ ! ನೆಲನಿಲ್ಲದ ನಿರ್ಮಲ ಚಿದ್ಭೂಮಿಯಲ್ಲಿ ಸ್ವಯಜ್ಞಾನಶಿಶು ಉದಯವಾಯಿತ್ತು ನೋಡ ! ಆ ಸ್ವಯಜ್ಞಾನ ಶಿಶು ಊಧ್ರ್ವಲೋಕಕ್ಕೆ ಹೋಗಿ ವ್ಯೋಮಾಮೃತಪ್ರಸಾದವನುಂಡು ನಾಮರೂಪು_ಕ್ರಿಯೆಗಳನಳಿದು, ನಿರವಯಶೂನ್ಯಲೀಲೆಯ ಧರಿಸಿ ಸೋಮನಾಳದಲ್ಲಿ ಶುಭ್ರ ಕಳೆ; ಪಿಂಗಳನಾಳದಲ್ಲಿ ಸುವರ್ಣಕಳೆ; ಸುಷುಮ್ನನಾಳದಲ್ಲಿ ಸುಜ್ಞಾನಜ್ಯೋತಿಪ್ರಕಾಶದಂತೆ ಏಳುನೂರ ಎಪ್ಪತ್ತುನಾಳದಲ್ಲಿ ಹೊಳೆವುತ್ತಿರ್ಪ ಪರಮಗುರು ಸಂಗನಬಸವಣ್ಣನ ಬೆಳಗಿನ ನಿಜಪ್ರಸಾದದೊಳಗೆ ಗುಹೇಶ್ವರ ಪ್ರಭುವೆಂಬ ರೂಪತಾಳಿ, ಪಕ್ವವಾದ ಮೇಲೆ ಮತ್ತಲ್ಲಿಯೆ ನಿರವಯಶೂನ್ಯವಪ್ಪುದು ತಪ್ಪದು ನೋಡ ! ಚೆನ್ನಬಸವಣ್ಣ.
————–

ಅಯ್ಯ ! ಪೂರ್ವವನಳಿದು ಪುನರ್ಜಾತನಾದ ಸತ್ಯಸದ್ಧರ್ಮಸ್ವರೂಪ ತಚ್ಛಿಷ್ಯನು ಶ್ರೀಗುರುಲಿಂಗಜಂಗಮದ ವೇಧಾ_ಮಂತ್ರ_ಕ್ರಿಯಾದೀಕ್ಷೆಯ ಪಡೆದು, ಅಷ್ಟಾವರಣದ ನೆಲೆಕಲೆಗಳ ತಿಳಿದು, ಪಂಚಾಚಾರ ಮೊದಲಾಗಿ ಸರ್ವಾಚಾರ ಸಂಪತ್ತಿನ ವಿವರ ತಿಳಿದು, ನೂರೊಂದು ಸ್ಥಲದ ಆಚರಣೆ_ಇನ್ನೂರಹದಿನಾರು ಸ್ಥಲದ ಸಂಬಂಧವನರಿದು, ಷಟ್ಸ್ಥಲ ಮಾರ್ಗವಿಡಿದು, ಶ್ರೀಗುರುಲಿಂಗ ಜಂಗಮಕ್ಕೆ ತನು_ಮನ_ಧನವಂಚನೆಯಿಲ್ಲದೆ ನಿರ್ವಂಚಕನಾಗಿ, ಭಕ್ತಸ್ಥಲದಲ್ಲಿ ನಿಂದಡೆ ಸತ್ಯಶುದ್ಧ ಕಾಯಕ[ವ ಮಾಡಿ] ಮಹೇಶ್ವರಸ್ಥಲದಲ್ಲಿ ನಿಂದಡೆ ಸತ್ಯಶುದ್ಧ ಭಿಕ್ಷವ ಮಾಡಿ, (ಬೇಡಿ?) ಬಂದ ಪದಾರ್ಥವ ಸಮರ್ಪಿಸಿ, ಪರದ್ರವ್ಯದಲ್ಲಿ ರಿಣಭಾರನಾಗದೆ, ಸತ್ಯಶುದ್ಧ ನಡೆನುಡಿಯಿಂದಾಚರಿಸಿ, ಶ್ರದ್ಧಾದಿ ಸಮರಸಾಂತ್ಯಮಾದ ಸದ್ಭಕ್ತಿಯ ತಿಳಿದು ಅನಾದಿಕುಳ ಸನ್ಮತವಾದ ದಶವಿಧ ಪಾದೋದಕ, ಏಕಾದಶ ಪ್ರಸಾದದ ವಿಚಾರ ಮೊದಲಾದ ಅರ್ಪಿತಾವಧಾನವ, ಪರಿಪೂರ್ಣಮಯ ಶ್ರೀಗುರುಲಿಂಗಜಂಗಮಕರುಣಕಟಾಕ್ಷೆಯಿಂದ, ಅಚ್ಚ ಪ್ರಸಾದಿಸ್ಥಲದ ಶರಣತ್ವವ ಪಡೆದು, ಸತ್ಯಸದಾಚಾರವುಳ್ಳ ಸದ್ಗುರುಲಿಂಗಜಂಗಮದ ನಿಜನಿಷ*ತ್ವಮಂ ತಿಳಿದು, ದಂತಧಾವನಕಡ್ಡಿ ಮೊದಲು Põ್ಞಪ ಕಟಿಸೂತ್ರ ಕಡೆಯಾದ ಸಮಸ್ತ ಪದಾರ್ಥವ ಗುರು_ಲಿಂಗ_ಜಂಗಮಕ್ಕೆ ಸಮರ್ಪಿಸಿ, ಅವರೊಕ್ಕುದ ಹಾರೈಸಿ, ಕೊಂಡು ಇಂತು ಅಂತರಂಗ ಪರಿಪೂರ್ಣವಾಗಿ ನಿಂದ ಸಮಯದಲ್ಲಿ, ಸ್ವಯ_ಚರ_ಪರಲೀಲೆಯ ಧರಿಸಿ ಜಂಗಮಾಕೃತಿಯಿಂದ ಬಂದ ಗುರುಲಿಂಗಜಂಗಮದ ವೃತ್ತಸ್ಥಾನವಾದ ಮೊಳಪಾದ ಪರಿಯಂತರವು ತೊಳದು ಬಹುಗುಣಿಯಲ್ಲಿ ಮಡಗಿಕೊಂಡು, ಹೊಸಮನೆ, ಹೊಸಧನ, ಧಾನ್ಯ ಭಾಂಡಭಾಜನ, ಹೊಸ ಅರುವೆ_ಆಭರಣ, ಜನನಿಜಠರದಿಂದಾದ ಅಂಗಾಂಗ, ಕಾಯಿಪಲ್ಯ, ಉಚಿತಕ್ರಿಯೆ ಮೊದಲಾಗಿ ಅರಿದಾಚರಿಸುವದು ನೋಡ ! ಆ ಮೇಲೆ ಗುರುಲಿಂಗಜಂಗಮದ ಪ್ರಕ್ಷಾಲನೆ ಮಾಡಿದ ಪಾದವನ್ನು ಮೂರು ವೇಳೆ ಅಡಿಪಾದವ ಸ್ಪರ್ಶನವ ಮಾಡಿ, ನಾಲ್ಕನೆಯ ವೇಳ್ಯಕ್ಕೆ ದಶಾಂಗುಲಿಗಳ ಒಂದು ವೇಳೆ ಸ್ಪರ್ಶನವ ಮಾಡಿದ ಉದಕವನ್ನು ಭಾಂಡಭಾಜನದಲ್ಲಿ ತುಂಬಿ ಸ್ವಪಾಕವ ಮಾಡುವುದು. ಆ ಸಮಯದಲ್ಲಿ ಬಿಂದುಮಾತ್ರ [ವಾದರೂ] ಇಷ್ಟಲಿಂಗ ಬಾಹ್ಯವಾದ ಭವಿಜನ್ಮಾತ್ಮರಿಗೆ ಹಾಕಲಾಗದು. ಇನ್ನು ಜಂಗಮದ ಅಂಗುಷ* ಎರಡು_ಅಂಗುಲಿ ಎಂಟರಲ್ಲಿ ತನ್ನ ತರ್ಜನಿ ಬೆರಳಿಂದ ಮೊದಲಂತೆ ಪಾದೋದಕವ ಮಾಡಿ, ಬಟ್ಟಲಲ್ಲಿ ಮಡಗಿ, ಪೂರ್ವದಲ್ಲಿ ಭಾಂಡದೊಳಗೆ ತುಂಬಿದ ಗುರುಪಾದೋದಕದಿಂದ ವಿಭೂತಿ ಘಟ್ಟಿಯ ಅಭಿಷೇಕವ ಮಾಡಿ, ಈ ಬಟ್ಟಲಲ್ಲಿ ಮಡಗಿದ ಲಿಂಗಪಾದೋದಕದಲ್ಲಿ ಮಿಶ್ರವ ಮಾಡಿ, ಇಪ್ಪತ್ತೊಂದು ಪ್ರಣಮವ ಲಿಖಿಸಿ ಶ್ರೀಗುರುಲಿಂಗಜಂಗಮವು ತಾನು ಮಂತ್ರಸ್ಮರಣೆಯಿಂದ ಸ್ನಾನ_ಧೂಳನ_ಧಾರಣವ ಮಾಡಿ, ಲಿಂಗಾರ್ಚನೆ ಕ್ರಿಯೆಗಳ ಮುಗಿಸಿಕೊಂಡು, ಆ ಮೇಲೆ ತೀರ್ಥವ ಪಡಕೊಂಬುವಂಥ ಲಿಂಗಭಕ್ತನು ಆ ಜಂಗಮಲಿಂಗಮೂರ್ತಿಯ ಸಮ್ಮುಖದಲ್ಲಿ ಗರ್ದುಗೆಯ ರಚಿಸಿಕೊಂಡು, ಅಷ್ಟಾಂಗಯುಕ್ತನಾಗಿ ಶರಣಾರ್ಥಿ ಸ್ವಾಮಿ ! ಜಂಗಮಲಿಂಗಾರ್ಚನೆಗೆ ಅಪ್ಪಣೆಯ ಪಾಲಿಸಬೇಕೆಂದು ಬೆಸಗೊಂಡು, ಆ ಗರ್ದುಗೆಯ ಮೇಲೆ ಮೂರ್ತವ ಮಾಡಿಕೊಂಡು ಆ ಕ್ರಿಯಾಜಂಗಮಮೂರ್ತಿಯ ಕರಕಮಲದಲ್ಲಿ ನೆಲಸಿರುವ ಪರಾತ್ಪರ ಜ್ಞಾನಜಂಗಮ ಲಿಂಗಮೂರ್ತಿಗೆ ಅಷ್ಟವಿಧಾರ್ಚನೆ_ಷೋಡಶೋಪಚಾರಂಗಳ ಸಮರ್ಪಿಸಿ, ಆ ಮೇಲೆ, ತನ್ನ ವಾಮಕರದಂಗುಲಿ ಮಧ್ಯದಲ್ಲಿ ಷಡಕ್ಷರಂಗಳ ಲಿಖಿಸಿಕೊಂಡು ಅರ್ಚಿಸಿ, ತನ್ನ ಹೃನ್ಮಂದಿರಾಲಯದಲ್ಲಿ ನೆಲಸಿರುವ ಜ್ಯೋತಿರ್ಮಯ ಇಷ್ಟಮಹಾಲಿಂಗವ ನಿರೀಕ್ಷಿಸಿ ಆ ಪರಶಿವಜಂಗಮಲಿಂಗದೇವನ ಚರಣಾಂಗುಷ*ವ, ತನ್ನ ವಾಮಕರಸ್ಥಲದಲ್ಲಿ ಸುತ್ತು ಚಿತ್ತಾನಂದ ನಿತ್ಯಪರಿಪೂರ್ಣ ಅವಿರಳ ಪರಂಜ್ಯೋತಿ ಸ್ವರೂಪವಾದ ಪ್ರಾಣಲಿಂಗವೆಂದು ಭಾವಿಸಿ ಅಷ್ಟವಿಧಾರ್ಚನೆ ಷೋಡಶೋಪಚಾರ ಕ್ರಿಯಗಳ ಮಾಡಿ, ಆಮೇಲೆ ಇಷ್ಟಲಿಂಗಜಪಪ್ರಣಮ ಒಂದು ವೇಳೆ ಪ್ರಾಣಲಿಂಗ ಜಪಪ್ರಣಮ ಒಂದು ವೇಳೆ ಭಾವಲಿಂಗ ಜಪಪ್ರಣಮ ಒಂದು ವೇಳೆ ಪ್ರದಕ್ಷಿಣವ ಮಾಡಿ ಜಂಗಮಸ್ತೋತ್ರದಿಂದ ಶರಣು ಮಾಡಿ ಪೂಜೆಯನಿಳುಹಿ, ಪಾತ್ರೆಯಲ್ಲಿರುವ ಗುರುಪಾದೋದಕದಲ್ಲಿ ಬಿಂದುಯುಕ್ತವಾಗಿ ಮೂಲ ಪ್ರಣಮವ ಲಿಖಿಸಿ ಬಲದಂಗುಷ*ದಲ್ಲಿ ನೀಡುವಾಗ ಷಡಕ್ಷರಿಮಂತ್ರವ ಆರು ವೇಳೆ ಸ್ಮರಿಸಿ, ನೀಡುವಾಗ ಅಲ್ಲಿ ಅನಾದಿಗುರುವೆಂದು ಭಾವಿಸುವುದು. ಎಡದಂಗುಷ*ದ ಮೇಲೆ ನೀಡುವಾಗ ಪಂಚಾಕ್ಷರವ ಐದು ವೇಳೆ ಸ್ಮರಿಸಿ, ನೀಡುವಾಗ ಅಲ್ಲಿ ಅನಾದಿಲಿಂಗವೆಂದು ಭಾವಿಸುವುದು. ಎರಡಂಗುಷ*ದ ಮಧ್ಯದಲ್ಲಿ ನೀಡುವಾಗ ಒಂಬತ್ತಕ್ಷರವ ಒಂದು ವೇಳೆ ಸ್ಮರಿಸಿ, ನೀಡುವಾಗ ಅಲ್ಲಿ ತ್ರಿಕೂಟಸಂಗಮ ಅನಾದಿಜಂಗಮವೆಂದು ಭಾವಿಸುವುದು. ಈ ಪ್ರಕಾರದಲ್ಲಿ ನೀಡಿದ ಮೇಲೆ ದ್ರವವನಾರಿಸಿ, ಭಸ್ಮಧಾರಣವ ಮಾಡಿ, ಒಂದೆ ಪುಷ್ಪವ ಧರಿಸಿ, ನಿರಂಜನ ಪೂಜೆಯಿಂದ ಪ್ರದಕ್ಷಣವ ಮಾಡಿ, ನಮಸ್ಕರಿಸಿ, ಆ ತೀರ್ಥದ ಬಟ್ಟಲೆತ್ತಿ ಆ ಜಂಗಮಲಿಂಗಕ್ಕೆ ಶರಣಾರ್ಥಿಯೆಂದು ಅಭಿವಂದಿಸಿ. ಅವರು ಸಲಿಸಿದ ಮೇಲೆ ತಾನು ಗರ್ದುಗೆಯ ಬಿಟ್ಟೆದ್ದು, ಪರಾತ್ಪರ ಬ್ರಹ್ಮಸ್ವರೂಪ ಜಂಗಮ ತೀರ್ಥದ ಸ್ತೋತ್ರವ ಮಾಡಿ, ಅಷ್ಟಾಂಗ ಹೊಂದಿ ಶರಣುಹೊಕ್ಕು, ನಿಮ್ಮ ಪ್ರಸಾದೋದಕಕ್ಕೆ ನಿರೂಪವ ಪಾಲಿಸಬೇಕು ಸ್ವಾಮಿ ! ಎಂದು ಬೇಡಿಕೊಂಡು ಬಂದು ಮೊದಲ ಹಾಂಗೆ ಗರ್ದುಗೆಯ ಮೇಲೆ ಮೂರ್ತವ ಮಾಡಿಕೊಂಡು ಆ ಜಂಗಮ ಮೂರ್ತಿಗಳು ಸಲಿಸಿದೋಪಾದಿಯಲ್ಲಿ ತಾನು ಸಲಿಸುವುದು. ಆಮೇಲೆ ಷಟ್ಸ್ಥಲಭಕ್ತ ಮಹೇಶ್ವರರು ಅದೇ ರೀತಿಯಲ್ಲಿ ಸಲಿಸುವುದು. ಉಳಿದ ಷಟ್ಸ್ಥಲಮಾರ್ಗವರಿಯದ ಲಿಂಗಧಾರಕಶಿಶುವಾಗಿಲಿ, ಶಕ್ತಿಯಾಗಲಿ, ದೊಡ್ಡವರಾಗಲಿ ಆ ಗರ್ದುಗೆಯ ತೆಗೆದು ಲಿಂಗಕ್ಕೆ ಅರ್ಪಿಸಿಕೊಳ್ಳಬೇಕಲ್ಲದೆ ಬಟ್ಟಲೆತ್ತಲಾಗದು. ಅದೇನು ಕಾರಣವೆಂದಡೆ, ಅವರಿಗೆ ಇಪ್ಪತ್ತೊಂದು ದೀಕ್ಷೆ, ಷಟ್ಸ್ಥಲಮಾರ್ಗ, ಸರ್ವಾಚಾರ ಸಂಪತ್ತಿನಾಚರಣೆ ಮುಂದಿದ್ದರಿಂದ ಅವರು ಬಟ್ಟಲೆತ್ತಲಾಗದು. ಹೀಂಗೆ ಸಮಸ್ತರು ಸಲಿಸಿದ ಮೇಲೆ ಕೊಟ್ಟು_ಕೊಂಡ, ಭಕ್ತ_ಜಂಗಮವು ಇರ್ವರು ಕೂಡಿ ಮುಕ್ತಾಯವ ಮಾಡಿದಲ್ಲಿಗೆ ದಶವಿಧ ಪಾದೋದಕವಾಗುವುದು. ಆ ಮೇಲೆ ಗುರುಪಾದೋದಕದಿಂದ ಪಾಕವ ಮಾಡಿದ ಭಾಂಡಭಾಜನಂಗಳು ತಾಂಬೂಲ ಪದಾರ್ಥ ಮುಂತಾಗಿ ಇರ್ವರು ಕೂಡಿ ಮೌನಮಂತ್ರ ಧ್ಯಾನದಿಂದ ಹಸ್ತಸ್ಪರ್ಶನವ ಮಾಡಿ. ಶುದ್ಧ ಪ್ರಸಾದವೆಂದು ಭಾವಿಸಿ, ಬಹುಸುಯಿದಾನದಿಂದ ಸಮಸ್ತ ಜಂಗಮಭಕ್ತ ಮಹೇಶ್ವರ ಶರಣಗಣಾರಾಧ್ಯರಿಗೆ ಎಡೆಮಾಡಿ, ಅಷ್ಟಾಂಗ ಹೊಂದಿ, ಎಡಬಲ ಗಣತಿಂಥಿಣಿಯ ನೋಡಿ, ನಿರೀಕ್ಷಿಸಿ, ಶರಣಾರ್ಥಿ ! ಸ್ವಾಮಿ ! ಮಹಾಲಿಂಗಾರ್ಪಿತವ ಮಾಡಬೇಕೆಂದು ಅಭಿವಂದಿಸಿ, ಪತಿವ್ರತತ್ವದಿಂದ ಜಂಗಮಕ್ಕೆ ನಿರ್ವಂಚಕನಾಗಿ, ಭಕ್ತ_ಜಂಗಮವೆಂಬ ಉಭಯನಾಮವಳಿದು ಕ್ಷೀರ ಕ್ಷೀರ ಬೆರೆತಂತೆ ನಿರಾಕಾರ_ ನಿಶ್ಯಬ್ಧಲೀಲೆ ಪರಿಯಂತರವು ಶ್ರೀಗುರುಲಿಂಗಜಂಗಮಪಾದೋದಕಪ್ರಸಾದವ ಸಪ್ತವಿಧಭಕ್ತಿಯಿಂದ ಸಾವಧಾನಿಯಾಗಿ ಆಚರಿಸುವಾತನೆ ಜಂಗಮಭಕ್ತನಾದ ಅಚ್ಚಪ್ರಸಾದಿಯೆಂಬೆ ಕಾಣಾ ! ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣ.
————–

ಅಂಗಜೀವಿಗಳೆಲ್ಲಾ ಅಶನಕ್ಕೆ ನೆರೆದು, ಲಿಂಗವಾರ್ತೆಯ ನುಡಿವರಯ್ಯಾ. ಕಾಯಜೀವಿಗಳೆಲ್ಲಾ ಕಳವಳಿಸಿ ನುಡಿವರಯ್ಯಾ. ಮನಬಂದ ಪರಿಯಲ್ಲಿ ನುಡಿವಿರಿ, ಗುಹೇಶ್ವರಲಿಂಗ ನಿಮಗೆಲ್ಲಿಯದೊ ?
————–

ಅಟ್ಟದ ಮೇಲೆ ಹರಿದಾಡುವ ಇಲಿ ಕಾದಿರ್ದ ಬೆಕ್ಕ ತಪ್ಪಿಸಿ, ಬೆಕ್ಕಿನ ಕಣ್ಣೊಳಡಗಿತ್ತು ! ಕಣ್ಣೂ ಇಲಿಯೂ ಕೂಡೆ ಗುಹೇಶ್ವರಲಿಂಗವ ಕಂಡುದಿಲ್ಲ.
————–

ಅರಿವು ಅರಿವು ಎನುತಿಪ್ಪಿರಿ, ಅರಿವು ಸಾಮಾನ್ಯವೆ ? ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ ನಿಂದ ಹೆಜ್ಜೆಯನರಿಯಬಾರದು. ಮುಂದಣ ಹೆಜ್ಜೆಯಳಿದಲ್ಲದೆ, ಒಂದು ಪಾದ ನೆಲೆಗೊಳ್ಳದು. ನೆಲನ ಬಿಟ್ಟು ಆಕಾಶದಲ್ಲಿ ನಿಂದು ಮುಗಿಲೊಳಗೆ ಮಿಂಚಿದಲ್ಲದೆ ತಾನಾಗಬಾರದು._ಗುಹೇಶ್ವರನೆಂಬುದು ಬರಿದೆ ಬಹುದೆ ಹೇಳಿರೆ ?
————–

ಅಕ್ಷರವ ಬಲ್ಲೆನೆಂ(ವೆಂ?)ದು ಅಹಂಕಾರವೆಡೆಗೊಂಡು, ಲೆಕ್ಕಗೊಳ್ಳರಯ್ಯಾ. ಗುರು ಹಿರಿಯರು ತೋರಿದ ಉಪದೇಶದಿಂದ; ವಾಗದ್ವೈತವನೆ ಕಲಿತು ವಾದಿಪರಲ್ಲದೆ ಆಗು_ಹೋಗೆಂಬುದನರಿಯರು. ಭಕ್ತಿಯನರಿಯರು ಯುಕ್ತಿಯನರಿಯರು, [ಮುಕ್ತಿಯನರಿಯರು] ಮತ್ತೂ ವಾದಕೆಳಸುವರು. ಹೋದರು ಗುಹೇಶ್ವರಾ ಸಲೆ ಕೊಂಡಮಾರಿಗೆ.
————–

ಅಳಿವನಲ್ಲ ಉಳವನಲ್ಲ ಘನಕ್ಕೆ ಗಮನನಲ್ಲ ಮನಕ್ಕೆ ಸಾಧ್ಯನಲ್ಲ ತನ್ನ ತಪ್ಪಿಸಿ ಇದಿರನೊಪ್ಪಿಸಿಹೆನೆಂಬ ಭಿನ್ನಭಾವಿಯಲ್ಲ, ಗುಹೇಶ್ವರನ ಶರಣ. ಅಜಗಣ್ಣನ ಅಂತಿಂತೆನಬಾರದು ಕೇಳಾ ತಾಯೆ.
————–

ಅಂಗದ ಲಿಂಗವೆ ಮನದ ಲಿಂಗ, ಮನದ ಲಿಂಗವೆ ಭಾವದ ಲಿಂಗ, ಭಾವದ ಲಿಂಗವೆ ಜಂಗಮದಾಸೋಹ, ದಾಸೋಹವೆಂಬುದು ಸಂದಿಲ್ಲದ ನಿಜ ನೋಡಾ. ಅದರಂದವನೆ ತಿಳಿದು ನಿಂದ ನಿಲುಕಡೆಯ ಭೇದವ ಕೇಳಬೇಕೆಂದು ಬಂದಲ್ಲಿಯೆ ತಿಳುಹಬೇಕಯ್ಯಾ. ಇಂತೀ ಪ್ರಕಾರದಲ್ಲಿ ಸಂದ ಸೌಖ್ಯದ ಭೇದವನು, ಸಂದಿಲ್ಲದ ಲಿಂಗದ ನಿಜವನು, ಇಂದು ನಮ್ಮ ಗುಹೇಶ್ವರಲಿಂಗದಲ್ಲಿ ಚಂದಯ್ಯಂಗೆ ತಿಳುಹಿ ಕೊಡಾ ಚೆನ್ನಬಸವಣ್ಣಾ.
————–

ಅಂಗನೆಯ ಮೊಲೆ ಲಿಂಗವೆ ? ಬಳ್ಳ ಲಿಂಗವೆ ? ಕಿತ್ತು ಬಹ ಸಾಣೆ ಲಿಂಗವೆ ? ಆಡಿನ ಹಿಕ್ಕಿ ಲಿಂಗವೆ ? ಮೆಚ್ಚುವರೆ ಪ್ರಮಥರು ? ಮೆಚ್ಚುವರೆ ಪುರಾತನರು, ನಿಮ್ಮ ಭಕ್ತರು ? ಭಾವಭ್ರಮೆಯಳಿದು, ಗುಹೇಶ್ವರಾ ನಿಮ್ಮಲ್ಲಿ ಅನಾದಿಸಂಸಿದ್ಧವಾದ ಜಂಗಮವನರಿದಾತ ಬಸವಣ್ಣನೊಬ್ಬನೆ.
————–

ಅಯ್ಯ ಲಿಂಗಾಂಗ ಸಮರಸ ಹೇಗುಂಟೆಂದರೆ: ಸುಚಿತ್ತಕಮಲ ಮೊದಲಾಗಿ ಆಯಾಯ ಕರಸ್ಥಲದಲ್ಲಿ ಮೂರ್ತಗೊಂಡಿರುವ ಸುಜ್ಞಾನಜಂಗಮ ಸ್ವರೂಪನಾದ ಇಷ್ಟ ಮಹಾಲಿಂಗದ ಗರ್ಭದಲ್ಲಿ ತನ್ನಂಗವ ಬಿಟ್ಟು; ಎರಡು ನೇತ್ರ ಒಂದಾದ ಲಲಾಟನೇತ್ರದಲ್ಲಿ ಇಷ್ಟಲಿಂಗವನು ಮುಳುಗಿಸುವುದೀಗ ಲಿಂಗಾಂಗಸಂಗಸಮರಸವು ನೋಡಾ. ಆ ಇಷ್ಟ ಮಹಾಲಿಂಗ ನೇತ್ರದರ್ಪಣದಲ್ಲಿ ಪ್ರತಿಬಿಂಬವಾಗಿ ಮನೋನೇತ್ರಕ್ಕೆ ಒಂದೆರಡಾಗಿ ಕಾಣಲ್ಪಡುವುದೀಗ ಪ್ರಾಣಲಿಂಗವು. ಆ ಪ್ರಾಣಲಿಂಗಹಸ್ತಂಗಳೆಂಬ ಎರಡರಲ್ಲಿ ನೇತ್ರದ್ವಯವೆಂಬ ಕುಚಂಗಳೆರಡ ಹಿಡಿವುದೀಗ ಲಿಂಗಾಂಗಸಂಗಸಮರಸವು [ನೋಡಾ] ರೂಪು ರೇಖೆವಿಭ್ರಮ ವಿಲಾಸಕಳಾಲಾವಣ್ಯಸ್ವರೂಪವಾದ ಹರಶಿವ ಬ್ರಹ್ಮಮೂರ್ತಿಯ ಮುದ್ದು ಮುಖದ ಆಧಾರದಲ್ಲಿ ಓಂಕಾರನಾದಾಮೃತವ ತಾ ಚುಂಬನ ಮಾಡಲ್ಕೆ ಚಿತ್‍ಶಕ್ತಿಸ್ವರೂಪಮಪ್ಪ ತನ್ನ ಮುದ್ದುಮುಖದ ಆಧಾರದಲ್ಲಿ ಹುಟ್ಟಿದ ನಕಾರಾದಿ ಪಂಚಪ್ರಣಮಂಗಳು ಆ ಪಂಚಬ್ರಹ್ಮ ಚುಂಬನವ ಮಾಡಲ್ಕೆ ಇದು ಲಿಂಗಾಂಗ ಸಮರಸವು. ಇದು ಶರಣಸತಿ ಲಿಂಗಪತಿ ನ್ಯಾಯವು. ಇದು ಶ್ರೀ (ತ್ರಿ?)ತನುವ ಲಿಂಗಕ್ಕರ್ಪಿಸುವ ಕ್ರಮವು. ತನ್ನಲ್ಲಿ ತನ್ನ ತೋರಿ ನನ್ನಲ್ಲಿ ನನ್ನ ತೋರಿದನಾಗಿ ನಾನು ನೀನೆಂಬುದಿಲ್ಲ ನೀನು ನಾನೆಂಬುದಿಲ್ಲ, ತಾನೆ ತಾನಾದುದು. ಬಯಲು ಬಯಲು ಕೂಡಿದ ಹಾಗೆ, ಮಾತು ಮಾತ ಕಲಿವ ಹಾಗೆ ಪರಶಿವಲಿಂಗದಲ್ಲಿ ನಿಜದೃಷ್ಟಿ ಕರಿಗೊಂಡ ಮೇಲೆ ಗುಹ್ಯಕ್ಕೆ ಗುಹ್ಯ ಗೋಪ್ಯಕ್ಕೆ ಗೋಪ್ಯ ರಹಸ್ಯಕ್ಕೆ ರಹಸ್ಯ. ಇದ ಗುಹೇಶ್ವರನೆ ಬಲ್ಲನಲ್ಲದೆ, ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಾ ?
————–

ಅಯ್ಯ, ಸ್ಥೂಲದೇಹದ ಸುಖದಲ್ಲಿ ಹೊದ್ದಿದವರು ಸೂಕರನ ಹಾಂಗೆ. ಸೂಕ್ಷ್ಮದೇಹದ [ಸುಖ]ದಲ್ಲಿ ಹೊದ್ದಿದವರು ಮದಗಜದಂತೆ. ಕಾರಣ ದೇಹದ ಸುಖದಲ್ಲಿ ಹೊದ್ದಿದವರು ರಾಜಹಂಸನ ಹಾಂಗೆ. ಅದೆಂತೆಂದಡೆ: ಸ್ಥೂಲದೇಹವೆಂದಡೆ ಸಪ್ತಧಾತುಯುಕ್ತವಾದ ಪಂಚವಿಂಶತಿತತ್ತ್ವ ಸ್ವರೂಪು, ಆ ದೇಹಕ್ಕೆ ಬಿಂದು ಮಾತ್ರ ಸುಖ ಪರ್ವತದಷ್ಟು ದುಃಖ ನೋಡಾ. ಸೂಕ್ಷ್ಮದೇಹವೆಂದಡೆ:ಪಂಚರಸಾಮೃತಸ್ವರೂಪವಾದ ಕರಣಂಗಳು. ಆ ದೇಹಕ್ಕೆ ಬಿಂದು ಮಾತ್ರ ದುಃಖವು, ಪರ್ವತದಷ್ಟು ಸುಖ ನೋಡಾ. ದಶವಿಧತತ್ತ್ವಸ್ವರೂಪವಾದ ಕಾರಣದೇಹವೆಂದಡೆ: ಅನಂತನಾದಸ್ವರೂಪವಾದ ಏಕತತ್ತ್ವವನ್ನುಳ್ಳ ಆತ್ಮನೆ ಕಾರಣದೇಹ, [Àಅದು] ದಿವ್ಯ ಸುಧಾರಸಾಮೃತಸ್ವರೂಪವಾದ ಮಹಾಸದ್ಗಂಧದ ಪರಿಮಳದಂತಿಪ್ಪುದು ನೋಡಾ. ಆ ದೇಹಕ್ಕೆ ಅಣುಮಾತ್ರ ದುಃಖವಿಲ್ಲದ ಸುಖವುಂಟು ನೋಡಾ, ಲಿಂಗಸಂಗಿಯಾದ ಕಾರಣ. ಇಂತಪ್ಪ ಲಿಂಗಸಂಗದಿಂದ ಅಖಂಡಸುಖಿ ತಾನಾಗಬೇಕಾದಡೆ ಪಿಂಡಾದಿ ಜ್ಞಾನಶೂನ್ಯಾಂತಮಾದ ನೂರೊಂದು ಸ್ಥಳ_ಕುಳವ ಕರತಳಾಮಳಕವಾಗಿ ತಿಳಿದು, ಮೇಲಾದ ಜ್ಞಾನಶೂನ್ಯಸ್ಥಲದಲ್ಲಿ ನಿಂದು, ಪಿಂಡಾದಿ ಜ್ಞಾನ ಗುರುಕರುಣ ಸ್ಥಲಂಗಳೆಂಬ ಮಾರ್ಗವು ತಪ್ಪದೆ ನಡೆ_ನುಡಿ ಸಂಪನ್ನರಾಗಿ ನಿಜಾಚರಣೆಯಲ್ಲಿ ನಿಂದು ಅರು ವೈರಿ ಅಷ್ಟಮದ [ಸಪ್ತ]ವ್ಯಸನವೆಂಬ ಮಾಯಾಪಾಶಪರ್ವತಕ್ಕೆ ವಜ್ರಾಯುಧವಾಗಿ ನಿಂದರು ನೋಡಾ ನಮ್ಮ ಶರಣಗಣಂಗಳು. ಇಂತು_ಕಾರಣಸ್ವರೂಪವಾದ ಚಿದ್ಘನಲಿಂಗ ನಡೆ_ನುಡಿ_ಸ್ಥಳ_ಕುಳದನುಭಾವ ಸುಖವ ಪಡೆಯದ ಶೈವ ಜಡಕರ್ಮಿಗಳೆಲ್ಲ, ಅರುವೈರಿ ಅಷ್ಟಮದ ಸಪ್ತವ್ಯಸನವೆಂಬ ಮಾಯಾಪಾಶ ಕಾಲ ಕಾಮರ ಬಾಧೆಗೊಳಗಾಗಿ ಗುಹೇಶ್ವರಲಿಂಗದ ಶರಣರ ಮಾರ್ಗವನರಿಯದೆ [ಕೆಟ್ಟರು]. ಕೆಟ್ಟಿತೀ ಲೋಕ ನೋಡಾ ಸಿದ್ಧರಾಮಯ್ಯಾ.
————–

ಅದ್ವೈತನ ಕರಸ್ಥಲದೊಳಗೆ, ಅನಂತನೆಂಬ ಗಿಳಿ ಮೂರ್ತಗೊಂಡು ಅತೀತ ಅನಾಗತ ವರ್ತಮಾನವೆಂಬ ಕೊರೆಕೂಳನುಂಡು ಓದಿತ್ತು ಅಗಣಿತ ಪುರಾಣ(ವ), ಅನಾಮಯ ಶಾಸ್ತ್ರವನು, ಅನುಪಮ ವೇದವೆಂದು._ ನಿಃಸ್ಥಲವ ಸ್ಥಲವಿಡಲು, ನಿರ್ಮಳಾತ್ಮಂಗೆ ಇಹವಿಲ್ಲ ಪರವಿಲ್ಲ ! ಆದಿ ಮಧ್ಯಾಂತ ನಿರಾಳ ಗುಹೇಶ್ವರನ ಅನುಭವಿಗೆ ಸರ್ವಾಂಗ ಲಿಂಗವು !
————–

ಅಂಗವಿಡಿದಂಗಿಯನೇನೆಂಬೆ ? ಆರನೊಳಕೊಂಡ ಅನುಪಮನು ನೋಡಾ ! ಮೂರರ ಹೊಲಿಗೆಯ ಬಿಚ್ಚಿ, ಎಂಟಾತ್ಮ ಹರಿಗಳ ತನ್ನಿಚ್ಛೆಯೊಳ್ ನಿಲಿಸಿದ ನಿಜಸುಖಿಯು ನೋಡಾ. ತತ್ತ್ವ ಮೂವತ್ತಾರ ಮೀರಿ, ಅತ್ತತ್ತವೆ ತೋರ್ಪ ಆಗಮ್ಯನು ನೋಡಾ ! ನಮ್ಮ ಗುಹೇಶ್ವರನ ಶರಣ ಅಲ್ಲಯ್ಯನ ಇರವನೊಳಕೊಂಡ ಪರಮಪ್ರಸಾದಿ ಮರುಳಶಂಕರದೇವರ ನಿಲವ ಬಸವಣ್ಣನಿಂದ ಕಂಡೆ ನೋಡಾ ಸಿದ್ಧರಾಮಯ್ಯಾ.
————–

ಅಂಗಕ್ಕೆ ಆಚಾರವಾಗಿ ಕಳೆಗಳುಳ್ಳನ್ನಕ್ಕ ಸಕಲ ಪದಾರ್ಥವ ಲಿಂಗಕ್ಕೆ ಕೊಟ್ಟಲ್ಲದೆ ಕೊಳಲಾಗದು. ಲಿಂಗವ ಬಿಟ್ಟು ಕಳೆ ಹಿಂಗಿದ ಬಳಿಕ ಅಂಗವೇನು ಬಲ್ಲುದೊ ? ಕಪ್ಪಡಿಯ ಸಂಗಮನಾಥನಲ್ಲಿ ಐಕ್ಯವಾದಂದಿಂಗೆ ನಿಜವ ಮರೆ. ಗುಹೇಶ್ವರಲಿಂಗ ಸಾಕ್ಷಿಯಾಗಿ, ಸಂಗನಬಸವಣ್ಣಾ ಅರ್ಪಿತವಿಲ್ಲದೆ ಕೊಳದಿರು ಅನರ್ಪಿತವ.
————–

ಅರಿವು ಮರವೆಯನರಿದು ನೆರೆನಿಂದ ನಿಜವನಾರು ಬಲ್ಲರೊ ? ಭಾವ ನಿರ್ಭಾವವ ಮೀರಿದ ಮಹಾಘನವ ಭಾವಿಸುವರಿನ್ನಾರೊ ? ಅದು ಭಾವಕ್ಕತೀತವಾಗಿ ಭಾವಿಸಲಿಲ್ಲ, ಮನಕ್ಕೆ [ಅ]ಗೋಚರವಾಗಿ ನೆನೆಯಲಿಲ್ಲ. ಅರಿವುದಕ್ಕೆ ಕುರುಹಿಲ್ಲ, ಮರೆವುದಕ್ಕೆ ತೆರಹಿಲ್ಲ. ಜ್ಞಾತೃ, ಜ್ಞಾನ, ಜ್ಞೇಯವಳಿದು ನಿಃಪತಿ, ಗುಹೇಶ್ವರಾ ನಿಮ್ಮ ಶರಣ, ನಿಶ್ಚಿಂತನಿವಾಸಿಯಾದನು
————–

ಅರಿದೆವರಿದೆವೆಂಬಿರಿ ಅರಿದ ಪರಿಯೆಂತು ಹೇಳಿರೆ ? ಅರಿದವರು ಅರಿದೆವೆಂಬರೆ ? ಅರಿಯಬಾರದ ಘನವನರಿದು, ಅರಿಯದಂತಿಪ್ಪರು ಗುಹೇಶ್ವರಾ.
————–

ಅರಿಯದಂತಿರಲೊಲ್ಲದೆ, ಅರಿದು ಕುರುಹಾದೆಯಲ್ಲಾ ! ಹಿರಿಯರೆಲ್ಲರು ನೆರೆದು ನಿಮ್ಮ ಕಟ್ಟಿದರೆ ಅಯ್ಯಾ, ಉಪಚಾರಕ್ಕೋಸುಗ ! ಸಾವಿಂಗೆ ಸಂಗಡವಾದೆಯಲ್ಲಾ_ಗುಹೇಶ್ವರಾ !
————–

ಅಕ್ಷರವ ನೋಡಿ ಅಭ್ಯಾಸವ ಕಲಿತು, ನಾನಾವರ್ಣವನಿಟ್ಟು (ಕಳೆವಿರಿ?)ಭೋ, ಸ್ವರೂಪಾಧಿಕನಲ್ಲ ನಿರೂಪಾಧಿಕನಲ್ಲ, ಮಹಾಘನವು ಕಾಣಿ ಭೋ. ಆದಿನಿರಾಳ ಮಧ್ಯನಿರಾಳ ಊಧ್ರ್ವನಿರಾಳ ಗುಹೇಶ್ವರಯ್ಯನು ತಾನೆ.
————–

ಅಚ್ಚಪ್ರಸಾದಿ ಅಚ್ಚಪ್ರಸಾದಿ ಎಂಬಿರಿ ಕೇಳಿರಯ್ಯಾ; ನಿಚ್ಚಕ್ಕೆ ನಿಚ್ಚ ಹುಸಿವ ಹುಸಿಗಳ ಕಂಡೆವಯ್ಯಾ [ನಿಮ್ಮಲ್ಲಿ]. ವಾಯು ಬೀಸದ ಮುನ್ನ, ಆಕಾಶ ಬಲಿಯದ ಮುನ್ನ, ಲಿಂಗಕ್ಕೆ ಅರ್ಪಿತಮುಖವ ಮರೆದಿರಯ್ಯಾ. ಭೋಜನವ ಮಾಡಿ ಭಾಜನವನಿಕ್ಕಿಟ್ಟು ಹೋಹ ಹಿರಿಯರಿಗೆ ಭಂಗ ನೋಡಾ ಗುಹೇಶ್ವರಾ.
————–

ಅಗ್ಘವಣಿಯ ತಂದು ಮಜ್ಜನವ ಮರೆದವನ, ಪುಷ್ಪವ ತಂದು ಪೂಜೆಯ ಮರೆದವನ, ಓಗರವ ತಂದು ಅರ್ಪಿತವ ಮರೆದವನ, ಲಿಂಗವ ಕಂಡು ತನ್ನ ಮರೆದವನ, ಮಹಾಘನವ ಒಳಕೊಂಡಿತ್ತು ಗುಹೇಶ್ವರ.
————–

ಅಂದಿನ ದಿನವನಂತಿರಿಸಿ, ಇಂದಿನ ದಿನವನಿಂತಿರಿಸಿ, ತಾ ಬೇರೆ ಮತ್ತೊಂದು ಪರಿಯಾದ ಅಪ್ಪಣ್ಣನು. ಅಂದಿನವನಂತಾಗದೆ ಇಂದಿನವನಂತಾಗದೆ, ಅಂತಿಂತುವ ಕೆಡಿಸಿ ಮತ್ತೊಂದಾದನು(ನ?)ವ. ಶ್ರುತಿಗೆಟ್ಟು ಮತಿಗೆಟ್ಟು ಹದಗೆಟ್ಟು ಹವಣುಗೆಟ್ಟು, ಬಿಮ್ಮುಗೆಟ್ಟು ಬೆಮಳ ವಿಮಳನಾದ ಅಪ್ಪಣ್ಣನು. ಗಣಿತ ಗುಣಿತವನಳಿದುಳಿದು, ಅಗಣಿತನಚಳಿತನಾದ ಅಪ್ಪಣ್ಣನು. ಅಮಳೋಕ್ಯವಾದ ಘನವ, ಅಮಳೋಕ್ಯವಾದ ಮಹವ, ಅಮಳೋಕ್ಯವಾದ ನಿಜದ ನಿಲವ ; ಕುಲಗೆಟ್ಟ, ಛಲಗೆಟ್ಟ, ಲಜ್ಜೆಗೆಟ್ಟ, ಭವಗೆಟ್ಟ ಗುಹೇಶ್ವರನ ಶರಣ ಸಂಗಮೇಶ್ವರದ ಅಪ್ಪಣ್ಣನು.
————–

ಅಹುದಹುದು ಬಸವಣ್ಣಾ ನೀನೆಂದುದನಲ್ಲೆನಬಹುದೆ ? ಎನ್ನ ಮನದ ಕಪ್ಪ ಕಳೆದು ನಿರ್ಲೇಪನ ಮಾಡಿ ಎನ್ನ ನಿರವಯಲಲ್ಲಿ ನಿಲಿಸಿ ಪ್ರತಿಷೆ*ಯ ಮಾಡುವಾತನು ನೀನೆಂಬುದು ಸತ್ಯವಚನ ನೋಡಾ. ಗುಹೇಶ್ವರನ ಮಹಾಗಣಂಗಳಿದ್ದಲ್ಲಿಗೆ ಹೋಗಿ ತಿಳುಹಿಕೊಂಡು ಬಾರಾ ಸಂಗನಬಸವಣ್ಣಾ.
————–

ಅಯ್ಯಾ ಜಲ, ಕೂರ್ಮ, ಗಜ, ಫಣಿಯ ಮೇಲೆ ಧರೆ ವಿಸ್ತರಿಸಿ ನಿಲ್ಲದಂದು, ಗಗನವಿಲ್ಲದಂದು, ಪವನನ ಸುಳುಹಿಲ್ಲದಂದು, ಅಗ್ನಿಗೆ ಕಳೆದೋರದಂದು, ತರು ಗಿರಿ ತೃಣ ಕಾಷಾ*ದಿಗಳಿಲ್ಲದಂದು, ಯುಗ ಜುಗ, ಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದಂದು, ನಿಜವನರಿದೆನೆಂಬ ತ್ರಿಜಗಾಧಿಪತಿಗಳಿಲ್ಲದಂದು ತೋರುವ ಬೀರುವ ಭಾವದ ಪರಿ, ಭಾವದಲ್ಲಿ ಭರಿತ, ಆಗಮ್ಯ ಗುಹೇಶ್ವರ ನಿರಾಳವು !
————–

ಅರ್ಧನಾರೀಶ್ವರನೆಂಬರು ಅನುವನರಿಯದವರು. ತ್ರಿಪುರವಿಜಯನೆಂಬರು ವಿರೋಧಿಗಳಾದವರು. ಕಾಮಾರಿಯೆಂಬರು ಕಣ್‍ಕಾಣದವರು. ಜಟಾಜೂಟಕೋಟೀರಭಾರನೆಂಬರು ಜಾಣರಲ್ಲದವರು. ನಮ್ಮ ಗುಹೇಶ್ವರಲಿಂಗ ಇಂತಹ ಬಹುರೂಪದವನಲ್ಲ !
————–

ಅಂಗಸಂಸಾರ ಲಿಂಗದಲ್ಲಿತ್ತು ಅರತು ಕಾಯವೆಂಬ ಸಂಬಂಧ ಸಂಶಯವಳಿದು ನಿಸ್ಸಂದೇಹಿಯಾಗಿಪ್ಪನು ನೋಡಾ ಬಸವಣ್ಣನು. ಪ್ರಾಣ ಭಾವವೆಂಬ ಶಂಕೆ ತಲೆದೋರದೆ ನಿಶ್ಶಂಕನಿಜೈಕ್ಯನಾಗಿಪ್ಪನು ನೋಡಾ ಬಸವಣ್ಣನು. ಆ ಬಸವಣ್ಣನ ಅಂತರಂಗದಲ್ಲಿ ನಿಶ್ಚಿಂತನಿವಾಸಿಯಾಗಿದ್ದೆನು. ಆ ಬಸವಣ್ಣನ ಅಂತರಂಗದಲ್ಲಿ ನಿರಾಲಂಬಜ್ಞಾನಿಯಾಗಿದ್ದೆನು. ಆ ಬಸವಣ್ಣನೊಳಗೆ ನಾನು ಅಳಿದುಳಿದೆನು. ಬಸವಣ್ಣನೆನ್ನ ಅಂತರಂಗದೊಳಗೆ ನಿಜನಿವಾಸಿಯಾಗಿದ್ದನು. ಇದು ಕಾರಣ:ಒಂದಕ್ಕೊಂದ ಬಿಚ್ಚಿ ಬೇರು(ರೆ?) ಮಾಡಬಾರದು ನೋಡಾ. ಗುಹೇಶ್ವರಲಿಂಗದಲ್ಲಿ `ಸಂಗನಬಸವ-ಪ್ರಭು’ವೆಂಬ ಎರಡು ಭಾವಭ್ರಾಂತಿಯಳಿದು, ನಿಭ್ರಾಂತಿ ಎಡೆಗೊಂಡಿತ್ತು ನೋಡಾ ಚನ್ನಬಸವಣ್ಣಾ
————–

ಅಂದಾದಿಬಿಂದುವಿಲ್ಲದಂದು ಅಂದಾ ಜೀವನೆಲ್ಲಿಪ್ಪುದೊ ? ಪಿಂಡ ರೂಪಿಸುವಲ್ಲಿ ಆ ಜೀವ ಬಂದು ಪರಿಯೆಂತುಟೊ ? ಇದನರಿದಡೆ ಗುರುವೆಂಬೆ, ಲಿಂಗವೆಂಬೆ, ಜಂಗಮವೆಂಬೆ, ಅಲ್ಲದಿದ್ದಡೆ ನರನೆಂಬೆ ಕಾಣಾ ಗುಹೇಶ್ವರಾ
————–

ಅಕಲ್ಪಿತನೆಂಬ ಭಕ್ತ ಮಾಡಿದ ಸೈದಾನವ ನೋಡಾ ! ಅನಂತಕೋಟಿ ಅಜಾಂಡಂಗಳೆ ಸೈದಾನವಾಗಿ, ಸವಿಕಲ್ಪಿತ ಸುಖಂಗಳೆಂಬವೆ ಶಾಕವಾಗಿ, ಸರ್ವಸ್ವಾದವೆಂಬುದೆ ಅಭಿಗಾರವಾಗಿ, ಇವೆಲ್ಲವನು ಸಹಜವೆಂಬ ಭಾಜನದಲ್ಲಿ ಎಡೆ ಮಾಡುತ್ತಿರಲು ಉಣಬಂದ ಹಿರಿಯರು ಉಣುತ್ತಿದ್ದರು ನೋಡಾ ! ನಿರ್ವಿಕಲ್ಪವೆಂಬ ಮಹಂತ ಬರಲು ಸೈದಾನವಡಗಿತ್ತು ಭಾಜನ ಉಳಿಯಿತ್ತು. ಆ ಭಾಜನವ ಉತ್ತರನಿರಾಳದಲ್ಲಿ ಅಳವಡಿಸಿಕೊಳಲು ನಿಶ್ಚಳ ಘನಪ್ರಸಾದವಾಯಿತ್ತು ಗುಹೇಶ್ವರಾ.
————–

ಅಚ್ಚಪ್ರಸಾದಿ ನಿಚ್ಚಪ್ರಸಾದಿಯೆಂಬ ಮುಚ್ಚಟ ಮುದಿಹೊಲೆಯರಿರಾ ನೀವು ಕೇಳಿರೊ. ಮುಟ್ಟುವ ಯೋನಿ ಮೆಟ್ಟುವ ಪಾದರಕ್ಷೆ ಈ ಎರಡೆಂಬ ಉಭಯಭ್ರಷ್ಟರಿಗೆ ಎಲ್ಲಿಯದೊ ಪ್ರಸಾದ ಗುಹೇಶ್ವರಾ ?
————–

ಅಂಗದ ಕೊನೆಯ ಮೇಲಣ ಕೋಡಗ ಕೊಂಬಿಗೆ ಹಾರಿತ್ತು, ಅಯ್ಯಾ ಇದು ಸೋಜಿಗ !_ ಕಯ್ಯ ನೀಡಲು ಮೈಯೆಲ್ಲವನು ನುಂಗಿತ್ತು ಒಯ್ಯನೆ ಕರೆದಡೆ ಮುಂದೆ ನಿಂತಿತ್ತು ಮುಯ್ಯಾಂತಡೆ ಬಯಲಾಯಿತ್ತು_ಗುಹೇಶ್ವರಾ !
————–

ಅಯ್ಯ ! ಸಪ್ತಧಾತುವಿನ ಸಪ್ತವ್ಯಸನವನಳಿದು, ಜೀವನ ಸಂಕಲ್ಪ_ವಿಕಲ್ಪ ಆಸೆ_ಆಮಿಷಂಗಳ ಹೊಟ್ಟುಮಾಡಿ ತೂರಿ, ಹಿಂದೆ ಹೇಳಿದ ಭಕ್ತಸ್ಥಲದಲ್ಲಿ ನಿಂದು ನಿರ್ವಂಚಕನಾಗಿ ಪಾತಕಸೂತಕಗಳ ಪರಿದು ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅವಿರಳಪರಂಜ್ಯೋತಿಮೂರ್ತಿಯಾಗಿ ಪ್ರಜ್ವಲಿಸುವ ಸದ್ವೀರಮಾಹೇಶ್ವರನಂತರಂಗದಲ್ಲಿ ಪರಮಾನಂದ ಲೀಲೆಯಿಂ ಇಪ್ಪತ್ತೈದು ತತ್ತ್ವಂಗಳನೊಳಕೊಂಡು ಹದಿನೆಂಟು ಸ್ಥಲಂಗಳ ಗರ್ಭೀಕರಿಸಿಕೊಂಡು, ಎರಡು ಸಾವಿರದ ಐನೂರ ತೊಂಬತ್ತೆರಡು ಮಂತ್ರಮಾಲೆಗಳ ಪಿಡಿದುಕೊಂಡು ಇಪ್ಪತ್ತುನಾಲ್ಕು ಸಕೀಲಗರ್ಭದಿಂ, ಗುರುಮುಟ್ಟಿ ಗುರುವಾದ ಗುರುವಿಂಗೆ ಎಂಬ ಎರಡೆಂಬತ್ತೆಂಟು ಕೋಟಿ ವಚನಾನುಭಾವವ ಸ್ವಾನುಭಾವಜ್ಞಾನದಿಂದರಿದು, ಪುಷ್ಪ ಪರಿಮಳ [ಜ್ಯೋತಿ] ಪ್ರಕಾಶದಂತೆ ಏಕರೂಪಿನಿಂದ ಮಂತ್ರಮೂರ್ತಿ ಗುರುಲಿಂಗವಾಗಿ [ನೆಲಸಿರ್ಪುದು] ನೋಡ ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು ಚೆನ್ನಬಸವಣ್ಣ.
————–

ಅಕಾರದಾದಿಯನರಿ, ಕ್ಷಕಾರದಂತ್ಯವ ತಿಳಿ. ಅಕಾರ ಉಕಾರ ಮಕಾರದೊಳಗಣ ಓಂಕಾಪ್ರಭೆಯ ತಿಳಿ. ವೇದಾದಿ ಪಂಚಕದಾದಿಯನರಿ. ಐಶ್ವರ್ಯ ಮೊದಲಾದೈದು ನಾಮವನುಳ್ಳ ವಿಭೂತಿ ಭಸಿತ ಭಸ್ಮ ಕ್ಷಾರ ರಕ್ಷೆ ಎಂಬೈದು ನಿನ್ನಭಿಮುಖದಿಂದ ಜನನವೆ ಹೇಳು ಗುಹೇಶ್ವರಾ ?
————–

ಅವಿರಳ ವಿಟನ ಮದುವೆಗೆ ನಿಬ್ಬಣಗಿತ್ತಿಯರೆಲ್ಲ ಬಂದು ಕೆಂಡದ ದಂಡೆಯನೆ ಮುಡಿದು, ಅಂಡಜವೆಂಬ ಅರಿಷಿಣವ ಮಿಂದು, ಉರಿಯೆಂಬ ಹಚ್ಚಡದ ಹೊಂದಿಕೆ (ಹೊದಿಕೆ?)ಯಲ್ಲಿ_ ನಿಬ್ಬಣಗಿತ್ತಿಯರು ಬಪ್ಪ ಭರವ ಕಂಡು ನೀರಲಡಿಗೆಯ ಮಾಡಿ; ವಾಯದ ಕೂಸಿಂಗೆ ಮಾಯದ ಮದವಣಿಗ; ಸಂಗ ಸಂಯೋಗವಿಲ್ಲದೆ ಬಸುರಾಯಿತ್ತು. ಕೂಸೆದ್ದು ಕುಣಿದಾಡಿ ಸೂಲಗಿತ್ತಿಯನವಗ್ರಹಿಸಿತ್ತು. ಗುಹೇಶ್ವರಾ ಒಬ್ಬ ಇಬ್ಬ ಮೂವರು ತ್ರಿದೇವತೆಗಳು ಬಲ್ಲರೆ ಆ ಲಿಂಗದ ಘನವನು?
————–

ಅಯ್ಯ, ಸಾತ್ವಿಕ ಶರಣರ ನುಡಿ ಹುಸಿಯೆ ? ಅದು ದಿಟ ಅದು ಆಟ. ಒಳಗೆಂಬುದೆ ದೇವಲೋಕ, ಹೊರಗೆಂಬುದೆ ಮರ್ತ್ಯಲೋಕ. ಈ ಎರಡು ಲೋಕಕ್ಕೆ ಹೊರಗಾಗಿ ನಾವಿರಲು ಈ ಎರಡು ಲೋಕದೊಳಗೆಯೂ ತಾವೆ ಇರಲಿ ಗುಹೇಶ್ವರಾ.
————–

ಅಡಿಗಡಿಗೆ ತೊಳೆದು ಕುಡಿವಡೆ ಹೊಟ್ಟೆಯ ಜಲಗರಕುತ್ತ ಬೆಳೆಯಿತ್ತೆ ? ಅಚ್ಚ ಪ್ರಸಾದಿಯಾದಡೆ ಹಿಂದೆ ಪರಿಯಾಣ ಉಳಿವುದೆ ? ಇವರೆಲ್ಲರು ನಿಮ್ಮ ಪೂಜಿಸಿ ವ್ರತಗೇಡಿಗಳಾದರು. ನಾ ನಿಮ್ಮ ಪೂಜಿಸಿ ಬದುಕಿದೆನು ಗುಹೇಶ್ವರಾ !
————–

ಅಂಗಜಂಗುಳಿಗಳೆಲ್ಲಾ ಅಶನಕ್ಕೆ ನೆರೆದರು. ಲಿಂಗದ ಹವಣನಿವರೆತ್ತ ಬಲ್ಲರು ? ಕಾಯಜೀವಿಗಳು ಕಳವಳಧಾರಿಗಳು, ದೇವರ ಸುದ್ದಿಯನಿವರೆತ್ತ ಬಲ್ಲರು ? ಮದ್ಯಪಾನವನುಂಡು ಮದವೆದ್ದ ಜೋಗಿಯಂತೆ ನುಡಿವರು. ಗುಹೇಶ್ವರನ ನಿಲವನಿವರೆತ್ತ ಬಲ್ಲರು.
————–

ಅರಿವರತು ಬೆರಗುಹೊಡೆದು, ಕುರುಹುಗೆಟ್ಟವನ, ಬಂದ ಬಟ್ಟೆಯಲ್ಲಿ ಬಾರದೆ ಹೋದವನ, ಕಂಗಳಲುಂಡವನ, ಮನದಲ್ಲಿ ದಣಿದವನ, ಕಿಚ್ಚಿಲ್ಲದೆ ಬೆಂದವನ, ಅಚ್ಚಲಿಂಗೈಕ್ಯನ, ಕೈಯಿಲ್ಲದೆ ಕೊಂಡವನ, ಬಾಯಿಲ್ಲದೆ ಉಂಡವನ, ಒಡಲಿಲ್ಲದೆ ಅವಗ್ರಹಿಸಿದವನ_ನಂಬು ಗುಹೇಶ್ವರಲ್ಲಮನ !
————–

ಅಯ್ಯ ! ಜ್ಞಾನೇಂದ್ರಿಯ, ಕರ್ಮೇಂದ್ರಿಯ, ವಿಷಯಂಗಳು, ಕರಣ ಮುಂತಾದವರ ಆಶಾಪಾಶಂಗಳನುಳಿದು ನುಡಿಯಂತೆ ನಡೆ, ನಡೆಯಂತೆ ನುಡಿ_ದೃಢಚಿತ್ತದಿಂದ ಘಟ್ಟಿಗೊಂಡು, ಹಿಂದೆ ಹೇಳಿದ ಸದ್ಭಕ್ತ_ಮಹೇಶ್ವರ_ಪ್ರಸಾದಿ_ಪ್ರಾಣಲಿಂಗಿ ಸ್ಥಲಂಗಳ ನೊಳಗುಮಾಡಿಕೊಂಡು, ಪರಮಪರಿಣಾಮಿ ಅಚಲಾನಂದಮೂರ್ತಿಯಾಗಿ, ಝಗಝಗಿಸಿ ನೆಲಸಿರ್ಪ ಶಿವಶರಣನಂತರಂಗದಲ್ಲಿ, ಚಿನ್ಮಯಪರನಾದ ಸ್ವಯಂಭು ಲೀಲೆಯಿಂ, ಮಿಶ್ರಾಮಿಶ್ರಂಗಳೊಡನೆ ಕೂಡಿದ, ಸಕಲ ತತ್ತ್ವಂಗಳನೊಳಕೊಂಡು, ಹದಿಮೂರುಸ್ಥಲಂಗಳ ಗರ್ಭೀಕರಿಸಿಕೊಂಡು, ಆರುಸಾವಿರದ ಒಂಬೈನೂರ ಹನ್ನೆರಡು ಮಂತ್ರ ಮಾಲೆಗಳ ಪಿಡಿದುಕೊಂಡು, ಇಪ್ಪತ್ತುನಾಲ್ಕು ಸಕೀಲಗರ್ಭದಿಂ ಕ್ಷೀರಕ್ಷೀರ ಬೆರದು ಭಿನ್ನದೋರದ ಹಾಂಗೆ, ಏಕರೂಪಿನಿಂದೆ ಈಳನಸ್ವರೂಪ ಪ್ರಸಾದಲಿಂಗಮೂರ್ತಿಯಾಗಿ [ನೆಲಸಿರ್ಪುದು] ನೋಡ ! ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು ಚೆನ್ನಬಸವಣ್ಣ.
————–

ಅಯ್ಯ ! ನಿಜವಸ್ತು ನೆಲೆಸಿರ್ಪ ನೇತ್ರವೇ ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ ರಹಸ್ಯಕ್ಕೆ ರಹಸ್ಯ, ಕೂಟಕ್ಕೆ ಕೂಟ ನೋಟಕ್ಕೆ ನೋಟ, ಬೇಟಕ್ಕೆ ಬೇಟ. ಅದೆಂತೆಂದಡೆ: ಲಿಂಗಸ್ಯ ಸಾಯಕಂ ನೇತ್ರಂ ಚುಕ್ಷುರ್ಲಿಂಗಸ್ಯ ಚಕ್ಷುಸಃ ಇಂತೆಂದುದಾಗಿ, ಗುರುಕಟಾಕ್ಷೆಯಿಂದ ಇಷ್ಟ_ಪ್ರಾಣ_ಭಾವಲಿಂಗ ಸಂಬಂಧವಾದ ಮಹಾಘನ ಚಕ್ಷುವೆ ಗುಹೇಶ್ವರಲಿಂಗಕ್ಕೆ ಮಹಾಪ್ರಸಾದ ನೋಡಾ ಸಿದ್ಧರಾಮಯ್ಯಾ.
————–

ಅಯ್ಯ ! ದೀಕ್ಷಾಗುರು, ಶಿಕ್ಷಾಗುರು, ಜ್ಞಾನಗುರುಗಳೆಂಬ ತ್ರಿವಿಧ ಗುರುಗಳು: ಕ್ರಿಯಾಲಿಂಗ, ಜ್ಞಾನಲಿಂಗ, ಭಾವಲಿಂಗವೆಂಬ ತ್ರಿವಿಧ ಲಿಂಗಗಳು: ಸ್ವಯ, ಚರ, ಪರವೆಂಬ ತ್ರಿವಿಧ ಜಂಗಮವು_ ಈ ಒಂಬತ್ತು ಆಚಾರಲಿಂಗದಲ್ಲಿ ಸಂಬಂಧವು. ಕ್ರಿಯಾಗಮ, ಭಾವಾಗಮ, ಜ್ಞಾನಾಗಮವೆಂಬ ತ್ರಿವಿಧ ಲಿಂಗಗಳು, ಸಕಾಯ, ಆಕಾಯ, ಪರಕಾಯವೆಂಬ ತ್ರಿವಿಧ ಗುರುಗಳು: ಧರ್ಮಾಚಾರ, ಭಾವಾಚಾರ, ಜ್ಞಾನಾಚಾರವೆಂಬ ತ್ರಿವಿಧ ಜಂಗಮವು_ ಈ ಒಂಬತ್ತು ಗುರುಲಿಂಗದಲ್ಲಿ ಸಂಬಂಧವು. ಕಾಯಾನುಗ್ರಹ, ಇಂದ್ರಿಯಾನುಗ್ರಹ, ಪ್ರಾಣಾನುಗ್ರಹವೆಂಬ ತ್ರಿವಿಧ ಗುರುಗಳು ಕಾಯಾರ್ಪಿತ, ಕರಣಾರ್ಪಿತ, ಭಾವಾರ್ಪಿತವೆಂಬ ತ್ರಿವಿಧ ಲಿಂಗಗಳು: ಶಿಷ್ಯ, ಶುಶ್ರೂಷ, ಸೇವ್ಯವೆಂಬ ತ್ರಿವಿಧ ಜಂಗಮವು_ ಈ ಒಂಬತ್ತು ಶಿವಲಿಂಗದಲ್ಲಿ ಸಂಬಂಧವು. ಈ ಮೂರು ಸ್ಥಲವು ಅನಾದಿಭಕ್ತನ ಮಾರ್ಗಕ್ರಿಯಾ ಸ್ವರೂಪು. ಜೀವಾತ್ಮ, ಅಂತರಾತ್ಮ, ಪರಮಾತ್ಮವೆಂಬ ತ್ರಿವಿಧಲಿಂಗಗಳು: ನಿರ್ದೇಹಾಗಮ, ನಿರ್ಭಾವಾಗಮ, ನಷ್ಟಾಗಮವೆಂಬ ತ್ರಿವಿಧ ಗುರುಗಳು; ಆದಿಪ್ರಸಾದಿ, ಅಂತ್ಯಪ್ರಸಾದಿ, ಸೇವ್ಯ ಪ್ರಸಾದಿಯೆಂಬ ತ್ರಿವಿಧ ಜಂಗಮವು_ ಈ ಒಂಬತ್ತು ಜಂಗಮಲಿಂಗದಲ್ಲಿ ಸಂಬಂಧವು_ ದೀಕ್ಷಾಪಾದೋದಕ, ಶಿಕ್ಷಾಪಾದೋದಕ, ಜ್ಞಾನಪಾದೋದಕವೆಂಬ ತ್ರಿವಿಧ ಲಿಂಗಂಗಳು, ಕ್ರಿಯಾನಿಷ್ಪ, ಭಾವನಿಷ್ಪ, ಜ್ಞಾನನಿಷ್ಪಯೆಂಬ ತ್ರಿವಿಧ ಗುರುಗಳು; ಪಿಂಡಾಕಾಶ, ಬಿಂದ್ವಾಕಾಶ, ಮಹದಾಕಾಶವೆಂಬ ತ್ರಿವಿಧ ಜಂಗಮವು_ ಈ ಒಂಬತ್ತು ಪ್ರಸಾದಲಿಂಗದಲ್ಲಿ ಸಂಬಂಧವು. ಕ್ರಿಯಾಪ್ರಕಾಶ, ಭಾವಪ್ರಕಾಶ, ಜ್ಞಾನಪ್ರಕಾಶವೆಂಬ ತ್ರಿವಿಧ ಲಿಂಗಗಳು ಕೊಂಡದ್ದು ಪ್ರಸಾದ, ನಿಂದದ್ದು ಓಗರ, ಚರಾಚರನಾಸ್ತಿಯೆಂಬ ತ್ರಿವಿಧ ಗುರುಗಳು; ಬಾಂಢಸ್ಥಲ, ಭಾಜನಸ್ಥಲ, ಅಂಗಲೇಪನಸ್ಥಲವೆಂಬ ತ್ರಿವಿಧ ಜಂಗಮವು_ ಈ ಒಂಬತ್ತು ಮಹಾಲಿಂಗದಲ್ಲಿ ಸಂಬಂಧವು. ಈ ಮೂರು ಸ್ಥಲವು ಅನಾದಿ ಜಂಗಮದ ಮೀರಿದ ಕ್ರಿಯಾ ಸ್ವರೂಪವು. ಈ ಉಭಯಂ ಕೂಡಲು ಐವತ್ತುನಾಲ್ಕು ಸ್ಥಲಂಗಳಾದವು. ಮುಂದುಳಿದ ಮೂರು ಸ್ಥಲಂಗಳಲ್ಲಿ ಭಾವಾಭಾವನಷ್ಟಸ್ಥಲವೆ ಮೂಲ ಗುರುಸ್ವರೂಪವಾಗಿ ಹದಿನೆಂಟು ಗುರುಸ್ಥಲಂಗಳನೊಳಕೊಂಡು ಕ್ರಿಯಾಗುರುಲಿಂಗ ಜಂಗಮ ಸ್ವರೂಪವಾದ ಇಷ್ಟಮಹಾಲಿಂಗದ ಅಧೋಪೀಠಿಕೆಯೆಂಬ ಹಲ್ಲೆಯಲ್ಲಿ ಸ್ಪರ್ಶನೋದಕ, ಅವಧಾನೋದಕ, ಗುರುಪಾದೋದಕ, ಅಪ್ಯಾಯನಪ್ರಸಾದ, ಸಮಯಪ್ರಸಾದ, ಗುರುಪ್ರಸಾದ ಆದಿ ಪ್ರಸಾದ, ನಿಚ್ಚಪ್ರಸಾದವಾಗಿ ತೆರಹಿಲ್ಲದೆ ಒಪ್ಪುತ್ತಿರ್ಪುದು ನೋಡ ! ಜ್ಞಾನಶೂನ್ಯಸ್ಥಲವೆ ಮೂಲ ಜಂಗಮಸ್ವರೂಪವಾಗಿ ಹದಿನೆಂಟು ಚರಸ್ಥಲಂಗಳನೊಳಕೊಂಡು ಮಹಾಜ್ಞಾನಗುರುಲಿಂಗಜಂಗಮ ಸ್ವರೂಪವಾದ ಇಷ್ಟಮಹಾಲಿಂಗದ ಜಲರೇಖೆಯನ್ನುಳ್ಳ ಪಾನಿವಟ್ಟಲಲ್ಲಿ ಪರಿಣಾಮೋದಕ, ನಿರ್ನಾಮೋದಕ, ಜಂಗಮಪಾದೋದಕ, ನಿತ್ಯೋದಕ, ಸಮತಾಪ್ರಸಾದ, ಪ್ರಸಾದಿಯ ಪ್ರಸಾದ, ಜಂಗಮ ಪ್ರಸಾದ, ಸದ್ಭಾವ ಪ್ರಸಾದ, ಜ್ಞಾನಪ್ರಸಾದ, ಸೇವ್ಯ ಪ್ರಸಾದ, ಅಚ್ಚ ಪ್ರಸಾದವಾಗಿ ತೆರಹಿಲ್ಲದೆ ಒಪ್ಪುತಿರ್ಪುದು ನೋಡ ! ಸ್ವಯ ಪರವರಿಯದ ಸ್ಥಲವೆ ಮೂಲಲಿಂಗಸ್ವರೂಪವಾಗಿ ಹದಿನೆಂಟು ಲಿಂಗಸ್ಥಲಂಗಳನೊಳಕೊಂಡು ಜ್ಞಾನಗುರುಲಿಂಗ ಜಂಗಮ ಸ್ವರೂಪವಾದ ಇಷ್ಟಮಹಾಲಿಂಗದ ಉನ್ನತವಾದ ಗೋಲಕದಲ್ಲಿ ಅಪ್ಯಾಯನೋದಕ, ಹಸ್ತೋದಕ, ಲಿಂಗಪಾದೋದಕ, ಪಂಚೇಂದ್ರಿ[ಯ] ವಿರಹಿತಪ್ರಸಾದ, ಕರಣಚತುಷ್ಟಯವಿರಹಿತ ಪ್ರಸಾದ, ಲಿಂಗಪ್ರಸಾದ ಅಂತ್ಯಪ್ರಸಾದ ಸಮಯಪ್ರಸಾದವಾಗಿ ತೆರಹಿಲ್ಲದೆ ಒಪ್ಪುತ್ತಿರ್ಪುದು ನೋಡ ! ಇಂತಪ್ಪ ಲಿಂಗಜಂಗಮದ ಪಾದೋದಕ ಪ್ರಸಾದವ ಸ್ವೀಕರಿಸಿದಂಥ ಜಂಗಮಭಕ್ತರಾದ ಸಹಜಭಕ್ತರೆ ಪ್ರಸಾದಪಾದೋದಕ ಸಂಬಂಧಿಗಳು. ಇವರು ಸ್ವೀಕರಿಸಿದಂಥ ಪಾದೋದಕವೆ ನೇತ್ರದಲ್ಲಿ ಕರುಣಜಲ; ವಾಕಿನಲ್ಲಿ ವಿನಯಜಲ; ಅಂತರಂಗದಲ್ಲಿ ಸಮತಾಜಲ_ ಇಂತೀ ತ್ರಿವಿಧೋದಕವೆ ಘಟ್ಟಿಗೊಂಡು ಸಾಕಾರವಾಗಿ, ತಿಳಿದುಪ್ಪ ಹೆರೆದುಪ್ಪವಾದಂತೆ ಇಷ್ಟ ಮಹಾಲಿಂಗಕ್ಕೆ ತ್ಯಾಗಾಂಗವಾದ ಶುದ್ಧ ಪ್ರಸಾದವಾಗಿರ್ಪುದಯ್ಯ; ಪ್ರಾಣಲಿಂಗಕ್ಕೆ ಭೋಗಾಂಗವಾದ ಸಿದ್ಧ ಪ್ರಸಾದವಾಗಿರ್ಪುದಯ್ಯ. ಭಾವಲಿಂಗಕ್ಕೆ ಯೋಗಾಂಗವಾದ ಪ್ರಸಿದ್ಧ ಪ್ರಸಾದವಾಗಿರ್ಪುದಯ್ಯ. ಇಂತೀ ತ್ರಿವಿಧಪ್ರಸಾದಪಾದೋದಕವೆ ಶರಣನ ಶುದ್ಧ ಪ್ರಸಾದವೆ ಜಿಹ್ವೆಯಲ್ಲಿ ಅಚ್ಚಪ್ರಸಾದವಾಗಿರ್ಪುದಯ್ಯ ಸಿದ್ಧಪ್ರಸಾದವೆ ಪಾದದಲ್ಲಿ ಸಮಯ ಪ್ರಸಾದವಾಗಿರ್ಪುದಯ್ಯ ಇಂತಪ್ಪ ಶರಣಸ್ವರೂಪವಾದ ಜ್ಞಾನಲಿಂಗಜಂಗಮದ ತೀರ್ಥಪ್ರಸಾದ ಸ್ವರೂಪವನ್ನು ಅರಿಯದೆ, ಕ್ರಿಯಾ `ಜಂಗಮಲಿಂಗ’ದ ತೀರ್ಥಪ್ರಸಾದವನ್ನು ತೆಗೆದುಕೊಳ್ಳಬಹುದು. ಜ್ಞಾನಲಿಂಗಜಂಗಮ ತೀರ್ಥಪ್ರಸಾದವನ್ನು ತೆಗೆದುಕೊಳ್ಳಲಾಗದು ಎಂಬ ಅಜ್ಞಾನಿಗಳ ಎನಗೆ ತೋರದಿರ ! ಗುಹೇಶ್ವರ !
————–

ಅರ್ಕನ ಅದ್ಭುತದಲ್ಲಿ ಕೆಟ್ಟರು ಹಲಬರು, ತಪ್ಪುಕರಾದರು ಹಲಬರು. ಬಿಂದು ಬಿಂದುವನೆ ಕೂಡಿ ಲಿಂಗಲೀಯವಾಯಿತ್ತು. ನಿಂದನು ಗುಹೇಶ್ವರನೆನ್ನೊಳಗೆ ಭರಿತನಾಗಿ.
————–

ಅಳಿಯ, ಬಳಿಯೆ ಸುಳಿವನಲ್ಲ ಪ್ರಳಯವಿಲ್ಲದ ವಿಜಯನು. ಕುಳಾಕುಳದ ಆತ್ಮನ ಅಂಗದ ಸಂಗಿಯಲ್ಲ. ಸುಳುಹಿನೊಳಗಣ ಸೂಕ್ಷ್ಮವ ತಿಳಿದು ನೋಡುವಡೆ ಅಣಿಮಾದಿ ಗುಣರಹಿತನು, ಅಕಲ್ಪಿತಮಹಿಮನನೇನೆಂಬೆ ? ನೆಳಲ ಕಳವಳದ ಬಳಿಯ ಭಾವರೂಪನಲ್ಲ ! ಬೆಳಗಿನೊಳಗಣ ಬೆಳಗು, ಗುಹೇಶ್ವರಾ ನಿಮ್ಮ ಶರಣನ ನಿಲವು !
————–

ಅಗ್ನಿಯ ಒಡಲೊಳಗೊಬ್ಬ ಆಕಾಶವರ್ಣದ ಸೂಳೆ; ಆ ಸೂಳೆಗೆ ಮೂವರು ಮಕ್ಕಳು ನೋಡಾ ! ಆ ಮಕ್ಕಳ ಕೈ ಬಾಯಲ್ಲಿ ಮೂರುಲೋಕ ಮರುಳಾಗಿ ಅಚ್ಚುಗಬಡುತ್ತಿರ್ದಡೇನು ಚೋದ್ಯವೊ ? ಕರಿಯ ಬಣ್ಣದ ಮುಸುಕನುಗಿದು ಬೆರೆಸಬಲ್ಲ ಶರಣಂಗಲ್ಲದೆ ಪರಮತತ್ವ(ಪರತತ್ವ ?)ವೆಂಬುದು ಸಾಧ್ಯವಾಗದು ಗುಹೇಶ್ವರಾ.
————–

ಅಯ್ಯ, ಕ್ರಿಯಾಚಾರದಲ್ಲಿ ಮೋಹವುಳ್ಳಾತನ ಸದ್ಗುರುವೆಂಬೆ ನೋಡ. ಜ್ಞಾನಾಚಾರದಲ್ಲಿ ನೈಷೆ*ಯುಳ್ಳಾತನ ಸಚ್ಚಿದಾನಂದಲಿಂಗವೆಂಬೆ ನೋಡ. ಭಾವಾಚಾರದಲ್ಲಿ ಪ್ರೇಮವುಳ್ಳಾತನ ಪರಾತ್ಪರಜಂಗಮವೆಂಬೆ ನೋಡ. ಈ ತ್ರಿವಿಧಾಚಾರದಲ್ಲಿ ಕಾಂಕ್ಷೆಯುಳ್ಳಾತನ ನಿಜಶರಣನೆಂಬೆ ನೋಡ. ಇಂತು ಆಚಾರಸನ್ಮಾರ್ಗ ಗುರುಲಿಂಗಜಂಗಮಶರಣರೆ ಗುಹೇಶ್ವರಲಿಂಗಕ್ಕೆ ಮೋಕ್ಷಮಂದಿರವೆಂಬೆ ನೋಡಾ, ಚೆನ್ನಬಸವಣ್ಣಾ.
————–

ಅರಿದರಿದು ಅರಿವು ಬರುದೊರೆವೋಯಿತ್ತು. ಕುರುಹ ತೋರಿದೊಡಿಂತು ನಂಬರು. ತೆರಹಿಲ್ಲದ ಘನವ ನೆನೆದು ಗುರು ಶರಣು ಶರಣೆಂಬುದಲ್ಲದೆ, ಮರಹು ಬಂದಿಹುದೆಂದು, ಗುರು ಕುರುಹ ತೋರಿದನಲ್ಲದೆ ಅರಿಯಬಲ್ಲಡೆ ಗುಹೇಶ್ವರನೆಂಬ ಲಿಂಗವು, ಹೃದಯದಲೈದಾನೆ.
————–

ಅಯ್ಯಾ ನೀನು ನಿರಾಳ ನಿರ್ಮಾಯನಾಗಿಪ್ಪೆಯಾಗಿ_ ಆಕಾಶ ಪ್ರಕಾಶವಿಲ್ಲದಂದು, ಸಾಕ್ಷಿ ಸಭೆಗಳಿಲ್ಲದಂದು ಸಚರಾಚರವೆಲ್ಲ ರಚನೆಗೆ ಬಾರದಂದು; ಆಧಾರದೊಳಗಣ ವಿಭೂತಿಯನೆ ತೆಗೆದು, ಭೂಮಿಯ ನೆಲೆಗೊಳಿಸಿ (ಸೆ?) ಪಂಚಾಶತ್‍ಕೋಟಿ ವಿಸ್ತೀರ್ಣ ಭೂಮಂಡಲಕ್ಕೆ ಸುತ್ತಿ ಹರಿದವು ಸಪ್ತಸಾಗರಂಗಳು. ಎಂಬತ್ತಾರು ಕೋಟಿಯ (ಯುಂ?) ತೊಂಬತ್ತೇಳುಲಕ್ಷ ಕಾಲ ಭವನ ಮಂಡಲಕ್ಕೆ ಉದಯ ಬ್ರಹ್ಮಾಂಡ. ಅರುವತ್ತಾರು ಕೋಟಿ ತಾರಾಮಂಡಲವೆಂದೆಡೆ, ಬೆಳಗಿ ತೋರಿದ ಹನ್ನೆರಡು ಜ್ಯೋತಿಯ ನಿಲಿಸಿ ತೋರಿದ ಹದಿನಾಲ್ಕು ಭುವನವ_ ಈ ಜಗದ ಜಂಗುಳಿಯ ಕಾವ ಗೋವಳ ತಾನಾಗಿ ಚೌರಾಸಿಲಕ್ಷ ಜೀವರಾಶಿಗಳಿಗೆ ರಾಶಿವಾಳ ತಾನಾಗಿ ಸಕಲದ ಅಳಿವಿನ ಉಳಿವಿನ ನಿಜದ ನಿಲವ ನೋಡಿ ಕಂಡೆನು. ಗುಹೇಶ್ವರಾ, ನಿಮ್ಮ ಶ್ರೀಪಾದಕೆ ನಮೋ ನಮೋ ಎನುತಿರ್ದೆನು.
————–

ಅನಂತಕೋಟಿ ಪ್ರಕಾಶವೆಂದು ಗಣಿಸಬಾರದ ಬ್ರಹ್ಮದಾ ಬೆಳಗು, ನೋಡಬಾರದ ಘನವು ತೆರಹಿಲ್ಲದ ಬೆಳಗು, ಮಹಾಬೆಳಗು ! ತನ್ನಿಂದ ತಾನಾದ ಸ್ವಯ ಸುಖದ ನಿಜ, ನಿತ್ಯ ನಿಜ; ರೂಪು ನಿರಂಜನ, ನಿಗಮಕ್ಕತೀತ ! ಹರಿಯಜರಿಗೆಟುಕದ ಜ್ಯೋತಿರ್ಮಯ ತಾನೆ ಲೀಲೆಗೆ ಮೂಲವಾದ. ಗುಹೇಶ್ವರಲಿಂಗ ಘನಕ್ಕೆ, ಘನವಾದುದು !
————–

ಅಯ್ಯ, ಸತ್ಯವ ನುಡಿಯದ, ಸದಾಚಾರದಲ್ಲಿ ನಡೆಯದ ಸದ್ಭಕ್ತಿಯ ಹಿಡಿಯದ, ನಿಜಮುಕ್ತಿಯ ಪಡೆಯದ ಸತ್ಕ್ರಿಯವ ಸಾರದ ಸಮ್ಯಜ್ಞಾನವ ಮುಟ್ಟದ; ಸುಡು ಸುಡು_ಈ ವೇಷದ ಭಾಷೆಯ ನೋಡಿ ಗುಹೇಶ್ವರಲಿಂಗವು ನಗುತ್ತೈದಾನೆ ಕಾಣಾ ಚೆನ್ನಬಸವಣ್ಣಾ.
————–

ಅಂಗೈಯೊಳಗೊಂದು ಅರಳ್ದ ತಲೆಯ ಹಿಡಿದುಕೊಂಡು ಕಂಗಳ ಮುತ್ತ ಪವಣಿಸುವಾಕೆ ನೀನಾರು ಹೇಳಾ ? ಸಂದ ಸಂಪಿಗೆಯರಳ ತುಂಬಿ ಬಂದುಂಬ ಭೇದವನರಿಯದೆ ಹಂಬಲಿಸುವ ಪರಿತಾಪವೇನು ಹೇಳಾ ? ಒಂದೆಂಬೆನೆ ಎರಡಾಗಿದೆ ಎರಡೆಂಬೆನೆ ಒಂದಾಗಿದೆ ಅರಿವಿನೊಳಗಣ ಮರಹಿದೇನು ಹೇಳಾ ? ದುಃಖವಿಲ್ಲದ ಅಕ್ಕೆ, ಅಕ್ಕೆಯಿಲ್ಲದ ಅನುತಾಪ ನಮ್ಮ ಗುಹೇಶ್ವರಲಿಂಗದಲ್ಲಿ ತೋರುತ್ತಿದೆ. ನೀನಾರೆಂದು ಹೇಳಾ ಎಲೆ ಅವ್ವಾ ?
————–

ಅರಿವರಿತು ಬೆರಗು ಹತ್ತಿತೆಂಬ ಜ್ಞಾನವಿದೇನೊ ? `ನಾಹಂ’ ಎಂಬಲ್ಲಿ ತಾನಾರೊ ? `ಕೋಡಿಹಂ’ ಎಂಬಲ್ಲಿ ಮುನ್ನಾರೊ ? `ಪರಬ್ರಹ್ಮ ಸೋಡಿಹಂ’ ಎಂಬಲ್ಲಿ ಮುನ್ನ ತಾನೇನಾಗಿದ್ದನೊ ? ಚಿದಹಂ ಎಂಬ ಹಮ್ಮಿನ ಮಾಲೆ ಇದೇನು ಹೇಳಾ ? “ನಿಃಶಬ್ದಂ ಬ್ರಹ್ಮ ಉಚ್ಯತೇ” ಎಂಬ ಶಬ್ದವಿಡಿದು ಬಳಲುವ ಕಾರಣವಿದೇನು ಹೇಳು ಗುಹೇಶ್ವರಾ ?
————–

ಅರಿವಿನ ಕುರುಹಿದೇನೊ ಒಳಗೆ ಅನು(ನಿ?)ಮಿಷ ನಂದಿನಾಥನಿರಲು ? ಪೂಜಿಸುವ ಭಕ್ತನಾರೊ? ಪೂಜೆಗೊಂಬ ದೇವನಾರೊ ? ಮುಂದು ಹಿಂದು, ಹಿಂದು ಮುಂದಾಡದೆ, ಗುಹೇಶ್ವರ ನೀನು ನಾನು, ನಾನು ನೀನಾದೊಡೆ ?
————–

ಅದೃಷ್ಟಕರಣದ ಮೇಲಣ ಪೂರ್ವಾಶ್ರಯವ ಕಳೆದು ಗುರುವಿನ ಹಸ್ತ ಮುಟ್ಟಿತ್ತೆಂಬ ಸಂದಣಿಯಲ್ಲಿ ಹೋಗದು. ಪಂಚೇಂದ್ರಿಯ ಲಿಖಿತವ ತೊಡೆದು, ಲಿಂಗಲಿಖಿತವ ಬರೆವುದು ಶಿಷ್ಯನ ಕೈಯಲ್ಲಲ್ಲದೆ ಗುರುವಿನ ಕೈಯಲಾಗದು. ಭವಿ ಮಾಡುವ ಬೋನವ, ಭಕ್ತ ಕಾಣದ ಹಾಗೆ ಅರ್ಪಿಸುವ ಭೇದವರಿದು, ಪ್ರಸಾದದ ಪೂರ್ವಾಶ್ರಯವ ಕಳೆದು, ರೂಪಿಸಬಲ್ಲೆವೆಂದಡೆ ಹರಿಯದು. ಗುರುವಿಲ್ಲದ ಶಿಷ್ಯ ಶಿಷ್ಯನಿಲ್ಲದ ಗುರು_ ಇಂತೀ ಒಂದಕ್ಕೊಂದು ಇಲ್ಲದೆ ಗುಹೇಶ್ವರಲಿಂಗದಲ್ಲಿ ಸಹಜದುದಯವಾದ ನಮ್ಮ ಚನ್ನಬಸವಣ್ಣಂಗೆ ನಮೋ ನಮೋ ಎಂಬೆನು.
————–

ಅರಿವರತು ಮರಹುಗೆಟ್ಟು ತನ್ನಲ್ಲಿ ತಾನು ಸನ್ನಹಿತನಾದವಂಗೆ ದುಃಖಿಸುವರೆ ಹೇಳಾ ? ಶೋಕಿಸುವರೆ ಹೇಳಾ ? ಒಡಲಿಲ್ಲದಾತಂಗೆ ಎಡೆಯಲೊಂದು ಅಳಿವುಂಟೆಂದು ನುಡಿದು ಹೇಳುವ ಮಾತು ಭ್ರಾಂತು ನೋಡಾ ! ಎರಡಿಲ್ಲದ ಐಕ್ಯಂಗೆ ಒಳಹೊರಗಿಲ್ಲ ನೋಡಾ, ಗುಹೇಶ್ವರನ ಶರಣ ಅಜಗಣ್ಣಂಗೆ !
————–

ಅನುಭವ ಪ್ರಾಣಲಿಂಗ ಪರಾತ್ಪರವೆಂದರಿದು, “ಅಣೋರಣೀಯಾನ್ ಮಹತೋ ಮಹೀಯಾನ್” ಎಂದು ಅಣುರೇಣು ತೃಣಕಾಷ*ದೊಳ್ಕೂಡಿ, “ತೇನ ವಿನಾ ತೃಣಾಗ್ರಮಪಿ ನ ಚಲತಿ”_ ಎಂದು ಪರಿಪೂರ್ಣ ಸದಾಶಿವನೆಂದರಿದು_ ಇಂತು ಕ್ಷಣವೇದಿ ಅಂತರಂಗವ ವೇದಿಸಲ್ಕೆ, ಅಗಣಿತ ಅಕ್ಷೇಶ್ವರ ತಾನೆಂದು ಪ್ರಣಮಪ್ರಭೆಯ ಮೇಲಣ ಪರಂಜ್ಯೋತಿ ತಾನೆಂದರಿದ ಕಾರಣ ಗುಹೇಶ್ವರಾ ನಿಮ್ಮ ಶರಣನುಪಾಮಾತೀತನು.
————–

ಅದ್ವೈತವೆಂಬ ಶಿಶುವೆನ್ನ ಕರಸ್ಥಲವ ಸೋಂಕಲೊಡನೆ ಎನ್ನ ತನ್ನಂತೆ ಮಾಡಿತ್ತಾಗಿ, ಎನ್ನ ನಾನೆಂಬ ವಿಚಾರವು ಅರತು ಹೋಯಿತ್ತು ಕೇಳಾ. ಮತ್ತೆ ಅನ್ಯವಿಚಾರವನೆಂತೂ ಅರಿಯೆನು. ಎನ್ನ ಪೂರ್ವಾಪರವ ನಿಮ್ಮಿಂದಲರಿಯಲೆಂದು ಬಂದು ನಿಮ್ಮ ಮರೆಹೊಕ್ಕೆನಾಗಿ, ಸಂಗನಬಸವಣ್ಣನ ಮಹಿಮೆಯ ನಾನೆತ್ತ ಬಲ್ಲೆನು ? ಗುಹೇಶ್ವರನ ಸಾಕ್ಷಿಯಾಗಿ ಸಂಗನಬಸವಣ್ಣ ನಿನ್ನ ಅಂತರಂಗದೊಳಗೆ ಬೆಳಗುತ್ತೈದಾನೆ. ಎನಗೊಮ್ಮೆ ಬಸವಣ್ಣನ ಘನವ ತಿಳುಹಿ ಕೊಡಾ ಚೆನ್ನಬಸವಣಾ
————–

ಅಯ್ಯ ! ನಾಟಕನಲ್ಲ ಬೂಟಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಶೀಲಿಗನಲ್ಲ ಕಪಟನಾಟಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ರುಂಡಮಾಲಿಗನಲ್ಲ ಗುಂಡುಗಾಸಿಗನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಪುಲಿಚರ್ಮನಲ್ಲ ಗಜಚರ್ಮನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ದಕ್ಷಾಧ್ವರಸಂಹರನಲ್ಲ ತ್ರಿಪುರಾರಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ನಂದಿವಾಹನನಲ್ಲ ಭೃಂಗಿಸ್ತುತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಸರ್ಪಧರನಲ್ಲ ಚಂದ್ರಶೇಖರನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಗಂಗಾಧರನಲ್ಲ ಗೌರಿಪ್ರಿಯನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಗಿರಿಜಾವಲ್ಲಭನಲ್ಲ ಪಾರ್ವತಿಪ್ರಿಯನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಯೋಗಿಯಲ್ಲ ಜೋಗಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಶ್ರವಣನಲ್ಲ ಸನ್ಯಾಸಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಕಾಳಾಮುಖಿಯಲ್ಲ ಪಾಶುಪತಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಇಂತು ಉಭಯವಳಿದ ಸಂಗನಬಸವಣ್ಣನ ಸರ್ವಾಂಗದಿ ಬೆಳಗುವ ಮಹಾಜ್ಯೋತಿ ತಾನೆ ನೋಡ ! ಗುಹೇಶ್ವರಲಿಂಗವು ಚೆನ್ನಬಸವಣ್ಣ.
————–

ಅಂಗದ ಮೇಲಣ ಲಿಂಗವ ಹಿಂಗಿ ಸ್ಥಾವರಲಿಂಗಕ್ಕೆರಗುವ ಭಂಗಿತರ ಮುಖವ ನೋಡಲಾಗದು. ಅದೆಂತೆಂದಡೆ; ತನ್ನ ಗಂಡನ ಬಿಟ್ಟು ಅನ್ಯ ಗಂಡರಿಗೆರಗುವ ಹಾದರಗಿತ್ತಿಯಂತೆ ಅವಂದಿರ ಭಕ್ತಿ. ಅಂತಪ್ಪ ಪಂಚಮಹಾಪಾತಕರ ಮುಖದತ್ತ ತೋರದಿರಾ ಗುಹೇಶ್ವರಾ
————–

ಅಂಗ ಉಳ್ಳನ್ನಬರ ಲಿಂಗಪೂಜೆಯ ಬೇಕು. ಲಿಂಗವೆಂಬ ಮೂರ್ತಿ ಉಳ್ಳನ್ನಬರ ಸಂದಿಲ್ಲದೆ ಅರ್ಪಿಸಬೇಕು. ಅಂಗವಳಿದ ಮತ್ತೆ ಲಿಂಗವೆಂಬ ಭಾವ ಹಿಂಗದಿರಬೇಕು. ಅದು ಗುಹೇಶ್ವರಲಿಂಗದ ಇರವು ಚಂದಯ್ಯಾ.
————–

ಅಚಲಸಿಂಹಾಸನವನಿಕ್ಕಿ; ನಿಶ್ಚಲ ಮಂಟಪದ ಸಂಚದೋವರಿಯೊಳಗೆ; ರುಚಿಗಳೆಲ್ಲವ ನಿಲಿಸಿ_ ಪಂಚರತ್ನದ ಶಿಖರ, ಮಿಂಚುಕೋಟಿಯ ಕಳಸ, ವಚನ ವಿಚಿತ್ರದ ಪುಷ್ಪದ ರಚನೆ[ಯ] ನವರಂಗದಲ್ಲಿ, ಖೇಚರಾದಿಯ ಗಮನ. ವಿಚಾರಿಪರ ನುಂಗಿ._ಗುಹೇಶ್ವರ ನಿಂದ ನಿಲುವು ಸಚರಾಚರವ ನುಂಗಿತ್ತು
————–

ಅನಾದಿ ಶರಣನ ಹೃತ್ಕಮಲ ಮಧ್ಯದ ತೇಜೋಮಯವನೇನೆಂದುಪಮಿಸಯ್ಯಾ ? ಜಲವೆ ಪಾದಶಿಲೆ, ಪೃಥ್ವಿಯೆ ಪಿಂಡಿಗೆ ಆಕಾಶವೆ ಲಿಂಗ, ಸಪ್ತಸಮುದ್ರಗಳೆ ಪಂಚಾಮೃತ, ಮೇಘವೆ, ಅಗ್ಘವಣಿಯ ಬಿಂದಿಗೆ, ಮಳೆಗಾಲವೆ ಮಜ್ಜನ, ಚಂದ್ರಮನೆ ನೊಸಲ ಗಂಧ, ನಕ್ಷತ್ರವೆ ಅಕ್ಷತೆ, ತರುಮರಾಧಿಗಳೆ ಪತ್ರೆಪುಷ್ಪ, ಮೊಳಗೆ ಪಂಚಮಹಾವಾದ್ಯ ! ಮಾಗಿಯೆಂಬ ಪರಿಯಾಣವ ಬೆಳಗಿ, ಬೇಸಗೆಯೆಂಬ ಓಗರವ ಗಡಣಿಸಿ ಸರ್ವಪರಿಮಳವೆಂಬ ತುಪ್ಪವನೆರೆದು, ಪರವೆಂಬ ಮೇಲೋಗರವನಿಕ್ಕಿ ಬೆಳಗು ಕತ್ತಲೆಯೆಂಬ ಕನ್ನಡವ ಕಟ್ಟಿ, ಲಿಂಗವ ಆರೋಗಣೆಯ ಮಾಡಿಸಿ ಸುಜ್ಞಾನದಲ್ಲಿ ಕೈಗೆರೆದು ಭಾವವೆಂಬ ವೀಳೆಯವ ಕೊಟ್ಟು, ಅನು ನೀನೆಂಬ ಅನುಲೇಪಗಂಧವ ಪೂಸಿ ವಾಯುವೆಂಬ ವಸ್ತ್ರವನುಡಿಸಿ, ಗುಹೇಶ್ವರನೆಂಬ ಲಿಂಗ ಪರಿಪೂರ್ಣವಾಗಿದ್ದ ಬಳಿಕ, ಮಜ್ಜನಕ್ಕೆರೆವಠಾವಾವುದೈ ಸಂಗನಬಸವಣ್ಣಾ ?
————–

ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ, ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ, ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ ! ತೊಟ್ಟಿಲು ಮುರಿದು ನೇಣು ಹರಿದು, ಜೋಗುಳ ನಿಂದಲ್ಲದೆ, ಗುಹೇಶ್ವರನೆಂಬ ಲಿಂಗವ ಕಾಣಬಾರದು
————–

ಅರಿದೆಹೆ ಅರಿದೆಹೆನೆಂದಡೆ ಅದೇಕೊ ಮುಂದೆ ಮರವೆ? ನೀನರಿದೆನೆಂಬುದು ನಿನ್ನಲ್ಲಿ ಲೇಸಾಗಿ ಉಳ್ಳಡೆ, ನಿನ್ನರಿವೆಲ್ಲವ ಹರಿಹಂಚ ಮಾಡಿ ಹೋದಡರಿ ಮರುಳೆ ! ಸ್ವತಂತ್ರ ಘನದೊಳಗಿರ್ದು, ನಿಜವನರಿದಿಹೆನೆಂದಡೆ ಮೂರ್ತಿ ಕಿರಿದಲ್ಲ, ನಿಲ್ಲು ಮಾಣು. ಗುಹೇಶ್ವರನೆಂಬ ಲಿಂಗದ ಘನಘಟ್ಟಿಯನರಿವಡೆ ನಿನ್ನರಿವೆಲ್ಲವ ಹರಿಹಂಚು ಮಾಡಿ, ನೀನರಿ ಮರುಳೇ_ಅನುಭಾವಿಯಾದಡೆ
————–

ಅಂಗ ಅಂಗನೆಯ ರೂಪಲ್ಲದೆ, ಮನ ವಸ್ತುಭಾವದಲ್ಲಿ ಬೆಚ್ಚಂತಿಪ್ಪುದು. ಬಂದ ಕಥನದಲ್ಲಿ ಬಂದು ಹಿಂಗಿದೆಯಲ್ಲಾ ಅಕ್ಕಾ ! ಗುಹೇಶ್ವರಲಿಂಗದಲ್ಲಿ ಉಭಯನಾಮವಳಿದೆ ಎನ್ನಕಾ
————–

ಅಭ್ಯಾಸದ ಮಾತಲ್ಲ, ಶ್ರೋತ್ರದ ಸುಖವಲ್ಲ, ಶಾಸ್ತ್ರದ ಅನುಭಾವದ ಮಾತಲ್ಲ. ಒಳಗಣ ಮಾತಲ್ಲ ಹೊರಗಣ ಮಾತಲ್ಲ. ಇದರಂಗ (ತು?) ವನರಿಯರೆ, ಅನುಭಾವವ ಮಾಡಿ ಫಲವೇನಯ್ಯಾ ? ಗುಹೇಶ್ವರಲಿಂಗವು ಉಪಮಾತೀತ ನೋಡಯ್ಯಾ ಸಿದ್ಧರಾಮಯ್ಯ !
————–

ಅರಸಲಿಲ್ಲದ ಘನವ ಅರಸುವದದೇನೊ? ತಿಳಿವುದದೇನೊ? ತಿಳುಹಿನ ಮುಂದಣ ಸುಳುಹು ತಾನೇನೊ? ಸರದ ಸಮತೆಯ ಪರಿಣಾಮವ ನೋಡಾ ! ಗುಹೇಶ್ವರನೆಂಬುದು ಅದೆ ಕಂಡಾ !
————–

ಅಗ್ನಿಗೆ ತಂಪುಂಟೆ? ವಿಷಕ್ಕೆ ರುಚಿಯುಂಟೆ ಹೇಳಾ ? ಕಂಗಳಿಗೆ ಮರೆಯುಂಟೆ ಹೇಳಾ ಲಿಂಗವೆ ? ದಾಳಿಕಾರಂಗೆ ಧರ್ಮವುಂಟೆ ? [ಕನ್ನಗಳ್ಳಂಗೆ] ಕರುಳುಂಟೆ ? ಗುಹೇಶ್ವರಾ, ನಿಮ್ಮ ಶರಣರು, ಮೂರು ಲೋಕವರಿಯೆ ನಿಶ್ಚಟರಯ್ಯಾ.
————–

ಅಯ್ಯ ! ಮುಂದೆ ಮರ್ತ್ಯಲೋಕದ ಮಹಾಗಣಂಗಳು ಸದ್ಭಕ್ತಿ, ಸದಾಚಾರ, ಸತ್ಕ್ರಿಯಾ, ಸಮ್ಯಜ್ಞಾನ, ಆಜ್ಞಾದೀಕ್ಷೆ ಮೊದಲಾದ ಇಪ್ಪತ್ತೊಂದು ದೀಕ್ಷೆಯ ವಿಚಾರ, ತ್ರಿವಿಧ ಸ್ಥಲ_ಷಟ್ಸ್ಥಲ ದಶವಿಧಪಾದೋದಕ, ಏಕಾದಶಪ್ರಸಾದ, ಷೋಡಶಾವರಣ, ನೂರೆಂಟುಸಕೀಲು ಮೊದಲಾದ ಸಮಸ್ತಸಕೀಲದ ಅರ್ಪಿತ_ಅವಧಾನಂಗಳು, ಮೂಲಪ್ರಣಮ ಮೊದಲಾಗಿ ಮಹಾಮಂತ್ರಗಳು, ಸರ್ವಾಚಾರ ಸಂಪತ್ತಿನ ಲಿಂಗಾನುಭಾವದ ನಡೆ_ನುಡಿಯ ವಿಚಾರವು ಷಡ್ವಿಧಶೀಲ, ಷಡ್ವಿಧವ್ರತ, ಷಡ್ವಿಧನೇಮದ ಕಲೆನೆಲೆಯ ಸನ್ಮಾರ್ಗವು, ಇಂತೀ ಸ್ವಸ್ವರೂಪುನಿಲುಕಡೆಯ ನಿಷ್ಕಲಂಕ ಪರಶಿವಮೂರ್ತಿ ಸದ್ಗುರು ಲಿಂಗಜಂಗಮದಿಂ ಪಡೆದು ಪರುಷಮುಟ್ಟಿದ ಲೋಹ ಬಂಗಾರವಾಗಿ ಮರಳಿ ಲೋಹವಾಗದಂತೆ, ಪಾವನಾರ್ಥವಾಗಿ ಸ್ವಯ_ಚರ_ಪರ, ಆದಿ_ಅಂತ್ಯ_ಸೇವ್ಯಸ್ಥಲ ಮೊದಲಾದ ಷಟ್ಸ್ಥಲಮಾರ್ಗವಿಡಿದಾಚರಿಸುವಲ್ಲಿ ಭಕ್ತಮಾಹೇಶ್ವರ ಶರಣಗಣಂಗಳು ಸಮಪಙô್ತಯಲ್ಲಿ ಸುಗಂಧ, ಸುರಸ, ಸುರೂಪು, ಸುಸ್ಪರ್ಶನ ಸುಶಬ್ದ, [ಸುಪರಿಣಾಮ], ಮಧುರ, ಒಗರು, ಕಾರ, ಹುಳಿ, ಕಹಿ, ಲವಣ, ಪಂಚಾಮೃತ ಮೊದಲಾದ ಪದಾರ್ಥದ ಪೂರ್ವಾಶ್ರಯವ ಕಳೆದು, ಮಹಾಘನಲಿಂಗಮುಖದಲ್ಲಿ ಶುದ್ಧ_ಸಿದ್ಧ_ಪ್ರಸಿದ್ಧ, ರೂಪು_ರುಚಿ_ತೃಪ್ತಿಗಳು ಮಹಾಮಂತ್ರ ಧ್ಯಾನದಿಂದ ಸಮರ್ಪಿಸಿ ಆ ಲಿಂಗದ ಗರ್ಭದಿ ನೆಲಸಿರ್ಪ ನಿರಂಜನಜಂಗಮದಿಂ ಮಹಾಪ್ರಸಾದವ ಪಡೆದು ತಾನೆ ಪ್ರಾಣಲಿಂಗವೆಂದು ಎರಡಳಿದು, ಪರಿಶಿವಲಿಂಗಲೀಲೆಯಿಂ ಭೋಗಿಸುವ ಸಮಪಙô್ತಯ ಮಧ್ಯದಲ್ಲಿ ಆವ ಗಣಂಗಳಾದರು ಸರಿಯೆ, ಪ್ರಸಾದ ನಮಗೆ ಹೆಚ್ಚಾಯಿತ್ತೆಂದು ತ್ರಿವಿಧದೀಕ್ಷಾಹೀನವಾದ ಉಪಾಧಿಲಿಂಗಭಕ್ತಂಗೆ ಒಲ್ಮೆಯಿಂದ ಶರಣಾಗೆಂದು ಕೊಡುವವನೊಬ್ಬ ಅಯೋಗ್ಯನು ! ಅಥವಾ ಗುರುಮಾರ್ಗದಾಚರಣೆಯ ತಿಳಿಯದೆ ಕೊಟ್ಟಲ್ಲಿ, ಇಂತು ಕೊಂಡ ಭಕ್ತನು ಬಹುನಿಜದಿಂದ ಆ ಪ್ರಸಾದವೆ_ -ಪ್ರಾಣವಾಗಿದ್ದುದ ನೋಡಿ ಮುಂದೆ ಷಟ್ಸ್ಥಲಲಿಂಗಾನುಭಾವ ಸದ್ಭಕ್ತ ಶರಣಗಣಂಗಳು ಕೊಟ್ಟಾತಂಗೆ ಇಂತು ಕೊಡದಂತೆ ಆಜ್ಞೆಯ ಮಾಡಿ, ಕೊಂಡಂಥವರ ದುರ್ಗುಣಗಳ ಬಿಡಿಸಿ ವೇಧಾಮಂತ್ರಕ್ರಿಯೆ ಹಸ್ತಮಸ್ತಕಸಂಯೋಗ ಮೊದಲಾದ ಇಪ್ಪತ್ತೊಂದು ದೀಕ್ಷೆಯ ಸದ್ಗುರುವಿನಿಂ ಮಾಡಿಸಿ ಸದಾಚಾರವ ಬೋಧಿಸಿ, ಅಷ್ಟಾವರಣದ ಗೊತ್ತ ಸರ್ವಾಂಗಲಿಂಗದಿ ತೋರಿ, ಅನಾದಿಜಂಗಮಪ್ರಸಿದ್ಧ ಪ್ರಸಾದ ಪಾದೋದಕವ ಕೊಟ್ಟುಕೊಂಬುದೆ ಸದಾಚಾರ_ಸನ್ಮಾರ್ಗ ನೋಡ ! ಗುಹೇಶ್ವರಲಿಂಗಕ್ಕೆ ಚೆನ್ನಬಸವಣ್ಣ.
————–

ಅಡವಿಯೊಳಗೆ ಕಳ್ಳರು ಕಡವಸಿದ್ಧ (ಕಡವಸದ?) ಸ್ವಾಮಿಯನು ಹುಡುಕಿ ಹುಡುಕಿ ಅರಸುತ್ತೈದಾರೆ._ಸೊಡರು ನಂದಿ ಕಾಣದೆ ! ಅನ್ನ ಪಾನದ ಹಿರಿಯರೆಲ್ಲರು ತಮ್ಮತಾವರಿಯದೆ, ಅಧರಪಾನವನುಂಡು ತೇಗಿ, ಸುರಾಪಾನವ ಬೇಡುತ್ತೈದಾರೆ. ಅರಿದ ಹಾರುವನೊಬ್ಬನು ಅರಿದ ತಲೆಯ ಹಿಡಿದುಕೊಂಡು, ಆಧ್ಯಾತ್ಮವಿಕಾರದ ನೆತ್ತರ ಕುಡಿದನು ನೋಡಾ_ಗುಹೇಶ್ವರಾ.
————–

ಅನ್ಯ ರಜವ ಸೋಂಕದೆ, ತನ್ನ ರಜವ ಬಾಧಿಸದೆ, ರವಿಯ ಬೆಳಸ ಬಳಸದೆ ಲಿಂಗದಲ್ಲಿ ಬೆಳೆದ ಬೆಳಸ ತಂದು, ಜಂಗಮದಲ್ಲಿ ಸವೆಸುತಿಪ್ಪ[ನು] ಲಿಂಗಭಕ್ತ. ಆ ಭಕ್ತನಲ್ಲಿ ಗುಹೇಶ್ವರಲಿಂಗವಿಪ್ಪನು.
————–

ಅಣುವಿಂಗೆ ಅಣು ಮಹತ್ತಿಂಗೆ ಮಹತ್ತು ಆದಲ್ಲಿ ಮರದೊಳಗಣ ಪತ್ರ_ಫಲಂಗಳು ಕಾಲವಶದಲ್ಲಿ ತೋರುವಂತೆ ಹರನೊಳಗಣ ಲೀಲಾಪ್ರಕೃತಿಸ್ವಭಾವ ಹರಲೀಲಾವಶದಲ್ಲಿ ತೋರುವುದು ಶಿವನೆ ಚೈತನ್ಯಾತ್ಮನು ಚಿತ್‍ಸ್ವರೂಪನೆಂದರಿಯಬಲ್ಲರೆ ಭಿನ್ನವೆಲ್ಲಿಯದೊ ಗುಹೇಶ್ವರಾ.
————–

ಅಯ್ಯ, ಅನುಭಾವವಿಲ್ಲದ ವಿರಕ್ತಿ ಆಯುಧವಿಲ್ಲದ ವೀರನಂತೆ. ಅನುಭಾವವಿಲ್ಲದ ಷಟ್‍ಸ್ಥಲವು ಕಣ್ಣಿಲ್ಲದ ಕುರುಡನಂತೆ. ಅನುಭಾವವಿಲ್ಲದ ಜಂಗಮವು ಕಾಲಿಲ್ಲದ ಹೆಳವನಂತೆ. ಅನುಭಾವವಿಲ್ಲದ ಶಿವಪೂಜೆಯ ಎಷ್ಟು ಮಾಡಿದಡೆಯು ಪ್ರಯೋಜನಕ್ಕೆಬಾರದು. ಅನುಭಾವವಿಲ್ಲದವನ ಲಿಂಗಪೂಜೆ ಬರಿಕೈಯಲ್ಲಿ ಹುಡಿಮಣ್ಣ ಹೊಯ್ದುಕೊಂಡಂತೆ. ಇದು ಕಾರಣ: ಭಕ್ತಿಗೆ ವಿರಕ್ತಿಗೆ ಮುಕ್ತಿಗೆ ವೀರಶೈವಕ್ಕೆ ಜಂಗಮಕ್ಕೆ ಅನುಭಾವವಿರಬೇಕು. ಅನುಭಾವವಿಲ್ಲದ ವಿರಕ್ತನಲ್ಲಿ ಪಾದೋದಕ_ಪ್ರಸಾದವ ಕೊಳಲಾಗದು. ಅನುಭಾವವುಳ್ಳ ಆಚಾರಸಂಪನ್ನನಾದ ಸದ್ಭಕ್ತನಲ್ಲಿ ಅನಾದಿ ಪಾದೋದಕ_ಪ್ರಸಾದವ ಕೊಂಡವರು ಪರಮಮುಕ್ತರಾದರಯ್ಯಾ ನಿಜಗುರು ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣಾ.
————–

ಅಂಡಜವಳಯವಿಲ್ಲದ ಮುನ್ನ, ದ್ವೀಪಂಗಳೇಳೂ ಇಲ್ಲದ ಮುನ್ನ, ರವಿಚಂದ್ರರಿಲ್ಲದ ಮುನ್ನ, ತ್ರಿದೇವತೆಗಳಿಲ್ಲದ ಮುನ್ನ, ಗುಹೇಶ್ವರನು ಉಲುಹಡಗಿರ್ದನಂದು ಅನಂತಕಾಲ !
————–

ಅಂಗದ ಮೇಲೆ ಲಿಂಗಸಂಬಂಧವಾದ ಬಳಿಕ, ಪ್ರಾಣದ ಮೇಲೆ ಜ್ಞಾನ ನಿರ್ಧಾರವಾಯಿತ್ತು ನೋಡಾ. ಒಳಹೊರಗೆಂಬ ಉಭಯವು ಏಕಾರ್ಥವಾಯಿತ್ತು, ಗುಹೇಶ್ವರಾ ನಿಮ್ಮ ನೆನೆದೆನಾಗಿ.
————–

ಅಂತರಂಗದಲ್ಲಿ ಅಡಗಿತ್ತೆಂದಡೆ ಭಾವಕ್ಕೆ ಪೂಜ್ಯವಲ್ಲ. ಬಹಿರಂಗದಲ್ಲಿ ಅಡಗಿತ್ತೆಂದಡೆ ಕ್ರಿಯಾಬದ್ಧವಲ್ಲ. ಅರಿವಿನೊಳಗೆ ಅಡಗಿತ್ತೆಂದಡೆ ಮತಿಗೆ ಹವಣಲ್ಲ. ಭಾವ ನಿರ್ಭಾವ ನಿಶ್ಶೂನ್ಯವನು ಕಾಂಬ ಪರಿ ಎಂತು ಹೇಳಾ ? ಕಂಡು ತನ್ನೊಳಗಿಂಬಿಟ್ಟುಕೊಂಬ ಪರಿ ಎಂತು ಹೇಳಾ ? ಗುಹೇಶ್ವರನೆಂಬ ಲಿಂಗವನರಿದು ಕೂಡಿ ಸುಖಿಯಹ ಪರಿ ಎಂತು ಹೇಳಾ ಸಂಗನಬಸವಣ್ಣ ?
————–

ಅರಿವ ಆತ್ಮ; ಕಂಗಳ ಮರೆಯಲ್ಲಿ ಕಾಂಬಂತೆ, ಕಿವಿಯ ಮರೆಯಲ್ಲಿ ಕೇಳುವಂತೆ_ ಕಂಗಳು ನಷ್ಟವಾದಲ್ಲಿ ಕರ್ಣ ಬಧಿರವಾದಲ್ಲಿ ಕಾಂಬುದು ಕೇಳುವುದು ಅಲ್ಲಿಯೆ ನಿಂದಿತ್ತು. ಆತ್ಮನ ಅರಿವಾವುದು ? ಗುಹೇಶ್ವರನೆಂಬ ಕುರುಹಾವುದು; ಅಂಬಿಗರ ಚೌಡಯ್ಯ ?
————–

ಅವಸ್ಥೆ ಅವಸ್ಥೆಯ ಕೂಡಿ, ಬಿಂದು ನಾದವ ಕೂಡಿ, ಕಳೆಕಳೆಗಳು ಒಂದಾದ ಪರಿಯ ನೋಡಾ ! ಅದು ಲಿಂಗದಲನಿಮಿಷ, ಆನೆಂಬ ಗುರುಪದವಾದೆನಯ್ಯಾ. ಹಿಂದು ಮುಂದ ಒಂದು ಮಾಡಿ ಮೂರ್ತಿಯಾಗಿ ಲಿಂಗ ಜಂಗಮವಾದ ಪರಿಯ ನೋಡಾ ! ಗುಹೇಶ್ವರನ ಅಮಳೋಕ್ಯವಾದ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂಬೆನು
————–

ಅರೆಯ ಮೇಲಣ ಹುಲ್ಲೆಗೆ ಕೆಂಗರಿಯ ಬಾಣವ ತೊಟ್ಟವನೆ (ತೊಟ್ಟಡೆ ?) ತಪ್ಪದೆ ತಾಗಿತ್ತಲ್ಲಾ ! ಅದು ಒಂದೆ ಬಾಣದಲ್ಲಿ ಅಳಿಯಿತ್ತಲ್ಲಾ ! ನಾರಿ ಹರಿಯಿತ್ತು, ಬಿಲ್ಲು ಮುರಿಯಿತ್ತು. ಹುಲ್ಲೆ ಎತ್ತ ಹೋಯಿತ್ತು ಗುಹೇಶ್ವರಾ?
————–

ಅಯ್ಯ ಎತ್ತಿದ (ಇಕ್ಕಿದ?) ಮಣಿ ಮುಕುಟದ ಮೇಲೆ ಸುತ್ತಿದ ನಾಗಭೂಷಣದ ಪಡೆಯೊಂದು ಕೋಟಿ ಶಿವನಿಪ್ಪ ನೆಲೆಯನಾರೂ ಅರಿಯರಯ್ಯ. ಇಕ್ಕಿದ ಕರೋಟಿಮಾಲೆಯೊಳಗಿಪ್ಪ ರುದ್ರರು ಒಂದು ಕೋಟಿ ಶಿವನಿಪ್ಪ ನೆಲೆಯನಾರೂ ಅರಿಯರಯ್ಯ. ಇಕ್ಕಿದ ರುಂಡಮಾಲೆಯೊಳಗಿಪ್ಪ ಮುಂಡಧಾರಿಗಳು ಒಂದು ಕೋಟಿ ಶಿವನಿಪ್ಪ ನೆಲೆಯನಾರೂ ಅರಿಯರಯ್ಯ. ಉಟ್ಟ ಗಜಚರ್ಮದೊಳಗಿಪ್ಪ ಋಷಿಗಳು ಒಂದು ಕೋಟಿ ಶಿವನಿಪ್ಪ ನೆಲೆಯನಾರೂ ಅರಿಯರಯ್ಯ. ಖಟ್ವಾಂಗದೊಳಗಿಪ್ಪ ಮನುಮುನಿಗಳು ಒಂದು ಕೋಟಿ ಶಿವನಿಪ್ಪ ನೆಲೆಯನಾರೂ ಅರಿಯರಯ್ಯ. ಗಂಗೆ ಗೌರಿ ಭೃಂಗಿ ಮೊದಲಾಗಿ ಶಿವನಿಪ್ಪ ನೆಲೆಯನರಿಯರು, ಗುಹೇಶ್ವರ ನಿಮ್ಮ ಶರಣ ಸಂಗನಬಸವಣ್ಣ ಬಲ
————–

ಅಯ್ಯ, ತನುವಿನಾಸೆಯನಳಿದಾತನ ಸತ್ತುಚಿತ್ತಾನಂದನ ಗುರುವೆಂಬೆ. ಮನದ ಕಾಂಕ್ಷೆಯನಳಿದಾತನ ಸರ್ವಾಚಾರನ ಲಿಂಗವೆಂಬೆ ನೋಡಾ. ಭಾವದ ಭ್ರಮೆಯ ನಳಿದಾತನ ಷಟ್‍ಸ್ಥಲಜಂಗಮವೆಂಬೆ ನೋಡಾ. ಪ್ರಾಣನ ಪ್ರಪಂಚನಳಿದಾತನ ನಿರಾತಂಕನಿರಾಲಂಬ ನಿಷ್ಕಳಂಕನಿಜಶರಣನೆಂಬೆ ನೋಡಾ. ಈ ಚತುರ್ವಿಧ ಪಾಶವ ಗೆದ್ದಾತನ ಗುಹೇಶ್ವರಲಿಂಗವೆಂಬೆ ನೋಡಾ ಚೆನ್ನಬಸವಣ್ಣಾ.
————–

ವಾಟ್ಸಾಪ್‌ನಲ್ಲಿ ಶೇರ್ ಮಾಡಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Close