ಕೆಜಿಎಫ್ 2 ಸಂಜಯ್ ದತ್ ಲುಕ್

ಕುವೆಂಪು ಅವರ ಎಲ್ಲ ಕವಿತೆಗಳ ಸಾಹಿತ್ಯ

ಜನ್ಮೋತ್ಸವ

ಇಲ್ಲಿ ಬಾ ಸಂಭವಿಸು ಇಂದೆನ್ನ ಹೃದಯದಲಿ,
ನಿತ್ಯವೂ ಅವತರಿಪ ಸತ್ಯಾವತಾರ!
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವಭವದಿ ಭವಿಸಿ, ಓ ಭವವಿದೂರ,
ಮಣ್ತನಕೆ ಮರತನಕೆ ಮಿಗತನಕೆ ಖಗತನಕೆ
ಮುನ್ನಡೆಗೆ ಕಣ್ಣಾದ ಗುರುವೆ, ಬಾರ!
ಮೂಡಿ ಬಂದಿನ್ನೆನ್ನ ನರರೂಪ ಚೇತನದಿ
ನಾರಾಯಣತ್ವಕ್ಕೆ ದಾರಿ ತೋರ!
ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ,
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಲಲಿ,
ದೇಶದೇಶದಿ ವೇಷವೇಷಾಂತರವನಾಂತು
ವಿಶ್ವ ಸಾರಥಿಯಾಗಿ ಲೀಲಾರಥವನೆಂತು
ಚೋದಿಸಿರುವೆಯೊ ಅಂತೆ, ಸೃಷ್ಟಿಲೋಲ,
ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ಯದಲಿ,
ಹೇ ದಿವ್ಯ ಸಚ್ಚಿದಾನಂದ ಶೀಲ!

————

ತನುವು ನಿನ್ನದು

ತನುವು ನಿನ್ನದು, ಮನವು ನಿನ್ನದು,
ಎನ್ನ ಜೀವನ ಧನವು ನಿನ್ನದು:
ನಾನು ನಿನ್ನವನೆಂಬ ಹೆಮ್ಮೆಯ
ಋಣವು ಮಾತ್ರವೆ ನನ್ನದು!

ನೀನು ಹೊಳೆದರೆ ನಾನು ಹೊಳೆವೆನು;
ನೀನು ಬೆಳೆದರೆ ನಾನು ಬೆಳೆವೆನು;
ನನ್ನ ಹರಣದ ಹರಣ ನೀನು,
ನನ್ನ ಮರಣದ ಮರಣವು!

ನನ್ನ ಮನದಲಿ ನೀನೆ ಯುಕ್ತಿ,
ನನ್ನ ಹೃದಯದಿ ನೀನೆ ಭಕ್ತಿ,
ನೀನೆ ಮಾಯಾಮೋಹ ಶಕ್ತಿಯು,
ನನ್ನ ಜೀವನ ಮುಕ್ತಿಯು!

———-

ಮುಚ್ಚುಮರೆಯಿಲ್ಲದೆಯೆ

ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು
ಬಿಚ್ಚಿಡುವೆ, ಓ ಗುರುವೆ, ಅಂತರಾತ್ಮಾ:
ನಾಕವಿದೆ, ನರಕವಿದೆ; ಪಾಪವಿದೆ, ಪುಣ್ಯವಿದೆ;
ಸ್ವೀಕರಿಸು, ಓ ಗುರುವೆ, ಅಂತರಾತ್ಮಾ!

ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು
ಪಾಪ ತಾನುಳಿಯುವುದೆ ಪಾಪವಾಗಿ?
ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಂಗೆ
ನರಕ ತಾನುಳಿಯುವುದೆ ನರಕವಾಗಿ?

ಸಾಂತ ರೀತಿಯ ನೆಮ್ಮಿ ಕದಡಿರುವುದೆನ್ನಾತ್ಮ;
ನಾಂತ ರೀತಿಯದೆಂತೊ, ಓ ಅನಂತಾ?
ನನ್ನ ನೀತಿಯ ಕರುಡಿನಿಂದೆನ್ನ ರಕ್ಷಿಸಯ್;
ನಿನ್ನ ನೀತಿಯ ಬೆಳಕಿನಾನಂದಕೊಯ್!

———-

ಈ ಸುಂದರ ಸಂಜೆ ಬರಿ ಬಂಜೆ

ಈ ಸುಂದರ ಸಂಜೆ-
ಬರಿ ಬಂಜೆ:
ನೀನಿಲ್ಲದೆ, ನಲ್ಲೆ,
ನಾ ಬಲ್ಲೆ!

ಹೊಲಗಳ ಸಿರಿಸೊಂಪು
ಕಣ್ಗಿಂಪು!
ಚೆಂಬಿಸಿಲಿನ ಶಾಂತಿ
ನಗೆ ಕಾಂತಿ!

ಕಣಿವೆಯ ತೋಪಿನಲಿ
ಪಸುರಿನಲಿ
ಕೋಗಿಲೆಯುಲಿಯುತಿದೆ;
ನಲಿಯುತಿದೆ!

ನೀಲಿಯ ದೂರದಲಿ
ಗಿರಿಪಂಕ್ತಿ
ಗಗನದ ತೀರದಲಿ
ದಿಗ್ದಂತಿ!

ದೆಸೆ ಏಳೂ ಸೊನ್ನೆ,
ಓ ರನ್ನೆ;
ಎಂಟನೆಯದು ಮಾತ್ರ
ಮಧುಪಾತ್ರ!

ಮನೆಯಿದೊ ‘ಉದಯರವಿ’!
ವಿರಹಿ ಕವಿ!
ಪಶ್ಚಿಮದಸ್ತ ಛವಿ
ಪಾಳು ಗವಿ!

ಈ ಸುಂದರ ಸಂಜೆ-
ಬರಿ ಬಂಜೆ:
ನೀನಿಲ್ಲದೆ, ನಲ್ಲೆ,
ನಾ ಬಲ್ಲೆ!

———-

ಅನಾದಿಗಾನ

ಅನಾದಿಗಾನವು ನಾನು – ಹೇ
ಅನಂತಗಾಯಕನೇ – ನಿನ್ನ ll ಪ ll

ರಚಿಸಿದೈ ಈ ಗಾನಮಾಧುರ್ಯಕಾಗಿ ನೀಂ
ವಿಶ್ವವೆಂಬುವ ಮಹಾ ನಿನ್ನ ವೀಣೆಯನು;
ನಿನ್ನ ಸ್ವರ್ಶನಕೆ ಆದಿಯಲಿ ಆ ಜಡವೀಣೆ
ಹಾಡತೊಡಗಿತು ನನ್ನ ಜೀವಗಾನವನು!

ಈ ಗಾನವನು ಕೇಳಿ ರವಿಚಂದ್ರತಾರಾಳಿ
ರಾಸಲೀಲೆಗೆ ತೊಡಗಿದವು ಹರ್ಷ ತಾಳಿ!
ಕಾಲದೇಶಾಕಾಶ ಸತ್ಯ ಮಿಥ್ಯೆಗಳೆಲ್ಲ
ಆನಂದ ಸ್ಫೂರ್ತಿಯಲಿ ಮೈತಿಳಿದುವೆಲ್ಲ!

ಗಾನವಾನಂದದಲಿ ಗಾಯಕನ ರಮಿಸುತಿದೆ;
ಚಿರಮಧುರ ನೂತ್ನವಾ ಗೀತರಸಪಾನ;
ಗಾನಗಾಯಕರೊಲ್ಮೆ ತೀರ್ಥದಲಿ ಲಭಿಸುತಿದೆ
ಕಲ್ಪಬುದ್ಭುದಗಳಿಗೆ ಸಂಸಾರಸ್ನಾನ!

———-

ಬಾ ಬೇಗನೆ

ಬೇಸರಿನ ಸಂಜೆಯಿದು; ಬೇಕೆನಗೆ ನಿನ್ನ ಜೊತೆ;
ಎಲ್ಲಿ ಹೋದೆಯೊ, ಇನಿಯ? ಬಾ ಬೇಗನೆ.
ಮಬ್ಬು ಕವಿದಿದೆ ಮನಕೆ; ಮಂಕು ಕವಿದಿದೆ ಮನಕೆ
ವಿರಹದೆದೆ ಕರೆಯುತಿದೆ: ಬಾ ಬೇಗನೆ!

ಮುಳುಗಿದುದು ರವಿ; ಓಕುಳಿಯ ಚೆಲ್ಲಿದುದು ಸಂಧ್ಯೆ;
ಮತ್ತೆಯೊಯ್ಯನೆ ಬೂದಿಯಾಯ್ತು ಕಾಂತಿ.
ಕತ್ತಲೆಯ ಕರಿನೆಳಲೊಡನೆ ಮೂಡಿದುವು ತಾರೆ;
ಹಬ್ಬಿಹುದು ಮರುಭೂಮಿಯಂತೆ ಶಾಂತಿ!

ಮನೆಯ ಬಾಗಿಲೊಳೊಬ್ಬಳೆಯೆ ಕುಳಿತು ಹೊಸ್ತಿಲಲಿ
ಹಾದಿ ನೋಡುತಲಿಹೆನು, ಬಾ ಬೇಗನೆ.
ಹೃದಯ ಶೂನ್ಯತೆಯ ಪರಿಹರಿಸಿ ಪೂರ್ಣತೆಯಿತ್ತು
ಮುದಗೊಳಿಸು, ಹೃದಯೇಶ, ಬಾ ಬೇಗನೆ.

———-

ತೆರೆದಿದೆ ಮನೆ, ಓ, ಬಾ ಅತಿಥಿ

ತೆರೆದಿದೆ ಮನೆ, ಓ, ಬಾ ಅತಿಥಿ!
ಹೊಸಬೆಳಕಿನ ಹೊಸಗಾಳಿಯ ಹೊಸ ಬಾಳನು ತಾ, ಅತಿಥಿ!

ಎಲ್ಲಾ ಇದೆ ಇಲ್ಲಿ;
ಉಲ್ಲಾಸವೆ ಹಾ ಕುಡಿಮುರುಟಿದ ಬಳ್ಳಿ!
ದೈನಂದಿನದತಿಪರಿಚಯ ಮಂದತೆಯನು ತಳ್ಳಿ
ಬಾ, ಚಿರ ನೂತನತೆಯ ಕಿಡಿ ಚೆಲ್ಲಿ,
ಓ ನವಜೀವನ ಅತಿಥಿ!

ಆವ ರೂಪದಲಿ ಬಂದರು ಸರಿಯೆ
ಬಾ ಅತಿಥಿ!
ಆವ ವೇಷದಲಿ ನಿಂದರು ಸರಿಯೆ
ನೀನತಿಥಿ!
ನೇಸರುದಯದೊಲು ಬಹೆಯ?
ಬಾ ಅತಿಥಿ!
ಇಷ್ಟ ಮಿತ್ರರೊಲು? ಬಂಧು ಬಳಗದೊಲು?
ಸುಸ್ವಾಗತ ನಿನಗತಿಥಿ!
ಕಷ್ಟದಂದದಲಿ? ನಷ್ಟದಂದದಲಿ?
ಸ್ವಾಗತವದಕೂ ಬಾ, ಅತಿಥಿ!

ಇಂತಾದರೂ ಬಾ; ಅಂತಾದರೂ ಬಾ;
ಎಂತಾದರು ಬಾ; ಬಾ, ಅತಿಥಿ!
ಬೇಸರವಿದನೋಸರಿಸುವ ಹೊಸ ಬಾಳುಸಿರಾಗಿ,
ಬಾ ಅತಿಥಿ!

ಹಾಡುವ ಹಕ್ಕಿಯ ಗೆಲುವಾಗಿ,
ಬಾ ಅತಿಥಿ!
ಮೂಡುವ ಚುಕ್ಕಿಯ ಚೆಲುವಾಗಿ,
ಬಾ ಅತಿಥಿ!
ಕಡಲಾಗಿ,ಬಾನಾಗಿ,ಗಿರಿಯಾಗಿ, ಕಾನಾಗಿ,
ಚಿರನವಚೇತನ ಝರಿಯಾಗಿ;
ಬೇಸರವನು ಕೊಚ್ಚುತೆ ಬಾ, ಅತಿಥಿ!
ಉಲ್ಲಾಸದ ರಸಬುಗ್ಗೆಯ ಚಿಮ್ಮಿಸಿ ಬಾ, ಅತಿಥಿ!
ವಿಷಣ್ಣತೆಯನು ಪರಿಹರಿಸಿ
ಪ್ರಸನ್ನತೆಯಾ ಸೊಡರುರಿಸಿ,
ಮನಮಂದಿರದಲಿ ಮಧುರತಿಯಾರತಿಯೆತ್ತುತೆ
ಬಾ, ಅತಿಥಿ!
ತೆರೆದಿದೆ ಮನೆ, ಓ ಬಾ ಅತಿಥಿ!
ಹೊಸತಾನದ ಹೊಸಗಾನದ ರಸಜೀವನ ತಾ, ಅತಿಥಿ!

———-

ವೀಣಾಗಾನ

ನಾನೆ ವೀಣೆ, ನೀನೆ ತಂತಿ,
ಅವನೆ ವೈಣಿಕ;
ಮಿಡಿದನೆನಲು ರಸದ ಹೊನಲು
ಬಿಂದು ಬಿಂದು ಸೇರಿ ಸಿಂಧು
ನಾದ ರೂಪಕ.

ಭುವನವೆಲ್ಲ ಸವಿಯ ಸೊಲ್ಲ
ಕವಿಯ ಗಾನ;
ನನ್ನ ನಿನ್ನ ಹೃದಯಮೀನ –
ಕಲ್ಲಿ ಜೇನ ಸೊಗದ ಸ್ನಾನ;
ಅಮೃತ ಪಾನ.

ತಂತಿಯಿಂಚರದಿ ವಿಪಂಚಿ
ರಸ ಪ್ರಳಯಿಸೆ
ನನ್ನ ನಿನ್ನ ಜೀವಮಾನ
ತಾನ ತಾನ ತನನ ತಾನ
ಪ್ರಾಣ ಪುಳಕಿಸೆ.

———-

ನೀನೆನ್ನ ಬಳಿಯಿರಲು

ನೀನೆನ್ನ ಬಳಿಯಿರಲು ಜಗ ತುಂಬಿ ತುಳುಕುವುದು;
ನೀನು ಹೋದರೆ ದೂರ ಶೂನ್ಯವಾಗುವುದು.
ನೀನೆನ್ನ ಜೀವನದ ಸರ್ವಸ್ವವಾಗಿರುವೆ;
ಓ ನನ್ನ ಪ್ರಿಯ ಮೂರ್ತಿ, ಎದೆಗೆ ಬಾರೈ.

ಬಿಸಿಲುರಿವ ಮರುಭೂಮಿಯಂದದಲಿ ನನ್ನೆದೆಯು
ವಿರಹದಿಂದುರಿದುರಿದು ಯೋಗಕೆಳಸುವುದು;
ಮಳೆಗರೆದು, ತಂಪಿತ್ತು, ಪರಿಹರಿಸಿ ಬೇಗೆಯನು,
ಪ್ರೇಮತೋಯದ ಮೂರ್ತಿ, ಎದೆಗೆ ಬಾರೈ.

ಅಗಲಿಕೆಯ ಸಹಿಸಲಾರೆನು ನಾನು; ನಿನ್ನನ್ನೆ
ಹಗಲಿರುಳು ನೆನೆದು ಬಗೆ ಕುದಿದು ಬೇಯುವುದು.
ಓ ನನ್ನ ಆನಂದ ಸತ್ಯಸುಂದರ ಮೂರ್ತಿ,
ಶೂನ್ಯವನು ಪೂರ್ಣಗೈ! ಎದೆಗೆ ಬಾರೈ!

———-

ಹೂವಿನ ಕೋರಿಕೆ

ಹೃದಯ ಕಮಲದಿ ಮಧುರ ಪ್ರೇಮ ಮಕರಂದವಿದೆ,
ಅಧರ ಚುಂಬನದಿಂದೆ ಸವಿಯದನು ಬಾ.
ಚಂಚಲತೆ ಏಕೆ, ಓ ಚಂಚರೀಕವೆ, ನಿನಗೆ?
ವಂಚನೆಯದಿನಿತಿಲ್ಲ; ಬಾ, ಬೇಗ ಬಾ!

ಇರುಳೆಲ್ಲ ತಪಗೈದು ಎದೆಯ ಹೊಂಬಟ್ಟಲಲಿ,
ಅರುಣನುದಯಕೆ ನೀನು ಬರುವೆಯೆಂದು,
ಪ್ರಣಯ ರಸವನೆ ಎರೆದು, ಕಾದಿಹೆನು ತುಟಿ ತೆರೆದು,
ಪಾನಗೈ, ಓ ನನ್ನ ಭ್ರಮರ ಬಂಧು!

———-

ನಾವು ನಿಯಮಿತವಾಗಿ ಹೆಚ್ಚಿನ ಕವಿತೆಗಳನ್ನು ಸೇರಿಸುತ್ತೇವೆ, ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡುತ್ತೀರಿ, ಧನ್ಯವಾದಗಳು.

ವಾಟ್ಸಾಪ್‌ನಲ್ಲಿ ಶೇರ್ ಮಾಡಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Close