ಕ.com ಯೂಟ್ಯೂಬ್ ಚಾನಲ್

ಅಕ್ಕಮ್ಮ ಅವರ ಎಲ್ಲ ವಚನಗಳ ಸಾಹಿತ್ಯ

ವಚನಕಾರ: ಅಕ್ಕಮ್ಮ, ಅಂಕಿತ ನಾಮ: ಆಚಾರವೆ ಲಿಂಗವಾದ ರಾಮೇಶ್ವರಲಿಂಗ, ಕಾಲ: 1160
————–
ಅಸಿ ಮಸಿ ಕೃಷಿ ವಾಣಿಜ್ಯ ಮುಂತಾದ ಕಾಯಕವ ಮಾಡಿ, ಭಕ್ತರ ಪಡುಗ, ಪಾದತ್ರಾಣ, ಪಹರಿ, ಬಾಗಿಲು, ಬೊಕ್ಕಸ, ಬಿಯಗ ಮುಂತಾದ ಕಾಯಕವಂ ಮಾಡಿಕೊಂಡು ವ್ರತಕ್ಕೆ ಊಣೆಯವಿಲ್ಲದೆ ಮಾಡುವ ಕೃತ್ಯಕ್ಕೆ ಕಡೆಯಾಗದೆ ಈ ಭಕ್ತನ ಅಂಗಳ ಅವಿಮುಕ್ತಿಕ್ಷೇತ್ರ, ಆತನ ಮನೆಯೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಾಶ್ರಯ.
————–
ಅನ್ಯದೈವ ಭವಿನಾಸ್ತಿಯಾದಲ್ಲಿ, ಪಾದತೀರ್ಥಪ್ರಸಾದವಿಲ್ಲದೆ ಬಾಯಿದೆರೆದಲ್ಲಿ, ಲಿಂಗಕ್ಕೆ ಕೊಡದೆ ಕೊಂಡಲ್ಲಿ, ಆ ವ್ರತಕ್ಕೆ ಆಚಾರವೆ ಪ್ರಾಣವಾಗಿರ್ಪ ರಾಮೇಶ್ವರಲಿಂಗ ದೂರಸ್ಥನಾಗಿಪ್ಪನು
————–
ಅಕ್ಕಿ ಬೇಳೆ ಬೆಲ್ಲ ಉಪ್ಪು ಮೆಣಸು ಅಡಕೆ ಫಲ ರಸ ದ್ರವ್ಯ ಮುಂತಾದ ದ್ರವ್ಯಕ್ಕೆ ವ್ರತವೊ ? ಮುಟ್ಟುವ ತಟ್ಟುವ ಸೋಂಕುವ ಚಿತ್ತಕ್ಕೆ ವ್ರತವೊ ? ಇವು ಬಾಹ್ಯದಲ್ಲಿ ಮಾಡುವ ಸೌಕರಿಯವಲ್ಲದೆ ವ್ರತಕ್ಕೆ ಸಲ್ಲ. ವ್ರತವಾವುದೆಂದಡೆ ತನ್ನಯ ಸ್ವಪ್ನದಲ್ಲಿ ತನಗಲ್ಲದುದ ಕಂಡಡೆ, ತಾ ಮುಟ್ಟದುದ ಮುಟ್ಟಿದಡೆ, ತಾ ಕೊಳ್ಳದುದ ಕೊಂಡಡೆ, ಆ ಸೂಕ್ಷ್ಮತನುವಿನಲ್ಲಿ ಆ ತನುವಂ ಬಿಟ್ಟು ನಿಂದುದು ವ್ರತ. ಸ್ಥೂಲತನುವಿನಲ್ಲಿ ಸರ್ವರ ನಿಂದೆಗೊಡಲಾಗದೆ, ಮಾಡಿಕೊಂಡ ನೇಮಕ್ಕೆ ಕೇಡುಬಂದಲ್ಲಿ ಆ ಅಂಗಕ್ಕೆ ಓಸರಿಸದೆ ನಿಂದುದು ಆಚಾರ. ಇಂತೀ ಅಂತರಂಗದಲ್ಲಿ ವ್ರತ, ಬಹಿರಂಗದಲ್ಲಿ ಆಚಾರ, ಇಂತೀ ಉಭಯ ಸಿದ್ಭವಾಗಿ ನಡೆವುದೆ ವ್ರತ ಆಚಾರz ಇಂತಿವನರಿದು ಮರೆದಲ್ಲಿ, ತಾ ಮಾಡಿಕೊಂಡ ಕುತ್ತಕ್ಕೆ ಹಾಡಿ ಮದ್ದನರೆದಂತೆ, ಜಗಕ್ಕೆ ಭಕ್ತನಾಗಿ ಆತ್ಮಂಗೆ ಅನುಸರಣೆಯಾದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
————–
ಅಂಗಲಿಂಗ ಸಹವಾಗಿ, ಆತ್ಮನರಿವು ಸಹವಾಗಿ, ಇಷ್ಟಪದಾರ್ಥವ ಇಷ್ಟ ಲಿಂಗಸಹವಾಗಿ, ರುಚಿಪದಾರ್ಥವ ಆತ್ಮಲಿಂಗಸಹವಾಗಿ, ರಸ ಗಂಧ ರೂಪ ಶಬ್ದ ಸ್ಪರ್ಶ ಪಂಚೇಂದ್ರಿಯಗಳಲ್ಲಿ ದೃಷ್ಟಪದಾರ್ಥವ ಇಷ್ಟಲಿಂಗಸಹವಾಗಿ, ಸ್ಥೂಲ ಸೂಕ್ಷ್ಮ ಕಾರಣದಲ್ಲಿ ಒಳಗು ಹೊರಗು ಸಹವಾಗಿ, ಅಳಿವು ಉಳಿವು ಸಹವಾಗಿ, ಕಾಬುದು ಕಾಣಿಸಿಕೊಂಬುದು ಸಹವಾಗಿ, ರಸವ ಕೊಂಡವನಂತೆ,ಅಸಿಯ ಮೊನೆ ಹರಿದಲ್ಲಿ ರಸ ಬಂದು ನಿಂತಂತೆ, ಎಲ್ಲಿ ಅರ್ಪಿತಕ್ಕೆ ಅಲ್ಲಿ ವಸ್ತು ಸಹವಾಗಿ ಎಲ್ಲಾ ಎಡೆಯಲ್ಲಿ ಪರಿಪೂರ್ಣ ಸಹವಾಗಿ, ಇಪ್ಪುದು ಸಹಭೋಜನಸ್ಥಲ. ಹೀಗಲ್ಲದೆ ಓಗರ ಮೇಲೋಗರವ ಲಾಗುಲಾಗಿಗೆ ತೋರುತ್ತ ಸಕಲಸಂಸಾರದ ಸಾಗರದಲ್ಲಿ ಮುಳುಗುತ್ತ, ಮರವೆ ಅಜ್ಞಾನದಲ್ಲಿ ಮರಳಿ ತಿರುಗುತ್ತ ನಾನಾವಿಕಾರತ್ರಯಗಳಿಂದ ಹುಟ್ಟುತ್ತ ಸಾವುತ್ತ, ಮತ್ತೆ ಸಾವಧಾನ ಸಹಭೋಜನವೆಂದಡೆ ನಾಚಿತ್ತು ಎನ್ನ ಮನ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಉಭಯವನಳಿದು ಏಕವಾದುದು ಸಹಭೋಜನಸ್ಥಲ.
————–
ಅನ್ಯರು ಮಾಡಿದುದ ಮುಟ್ಟದೆ ತನ್ನ ತಾ ಮಾಡಿಕೊಂಡು ನಡೆವುದು ಸೌಕರಿಯವಲ್ಲದೆ, ವ್ರತಕ್ಕೆ ಸಂಬಂಧವಲ್ಲ. ಅದೆಂತೆಂದಡೆ ರಸ ಗಂಧ ರೂಪು ಶಬ್ದ ಸ್ಪರ್ಶವೆಂಬ ಪಂಚೇಂದ್ರಿಯವ ಶುದ್ಧತೆಯ ಮಾಡಿ ಪಂಚಾಚಾರವೆಂಬುದನರಿತು, ರಸವ ರುಚಿಸುವಲ್ಲಿ ಬಹುದಕ್ಕೆ ಮುನ್ನವೆ ಭೇದವನರಿತು, ನಾಸಿಕ ವಾಸನೆಯ ಕೊಂಬಲ್ಲಿ ಸೋಂಕುವುದಕ್ಕೆ ಮುನ್ನವೆ ಸುಗುಣ ದುರ್ಗುಣವನರಿತು, ಕಾಂಬುದಕ್ಕೆ ಮುನ್ನವೆ ರೂಪ ನಿರೂಪೆಂಬುದನರಿತು, ನುಡಿಯುವುದಕ್ಕೆ ಮುನ್ನವೆ ಮೃದು ಕoಣವೆಂಬುದನರಿತು, ಇಂತೀ ಭೇದಂಗಳಲ್ಲಿ ಅರ್ಪಿತದ ಲಕ್ಷಣವ ಕಂಡು, ದೃಷ್ಟದಿಂದ ಕಟ್ಟುಮಾಡುವುದೆ ವ್ರತ ; ಆ ಗುಣ ತಪ್ಪದೆ ನಡೆವುದೆ ಆಚಾರ. ಇಂತೀ ವ್ರತಾಚಾರಂಗಳಲ್ಲಿ ಸರ್ವಶೀಲಸನ್ನದ್ಧನಾಗಿ, ಸರ್ವಮುಖ ಲಿಂಗಾವಧಾನಿಯಾಗಿ ಇಪ್ಪ ಅಂಗವೆ, ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗವು ತಾನೆ.
————–
ಅನಲನ ತಾಹಲ್ಲಿ, ಅನಿಲನ ಗಂಧ ಒಡಗೂಡಿ ಸೋಂಕುವಲ್ಲಿ, ಅಲ್ಲಿ ವ್ರತದಾಯತದ ಲಕ್ಷಣವನರಿಯಬೇಕು; ಮಿಕ್ಕಾದ ತಿಲ, ತೈಲ, ಫ್ಸೃತ, ಕ್ಷೀರ, ದದ್ಥಿ, ಮಧುರ, ಇಕ್ಷುದಂಡ, ಕ್ರಮುಕ, ಪರ್ಣ, ಚೂರ್ಣ, ರಸ, ದ್ರವ್ಯ ಮುಂತಾದವಿಂತು ಮಿಕ್ಕಾದ ಫಲ ಕುಸುಮ ವಿದಳ ಬಹುಧಾನ್ಯ ಮುಂತಾದ ಸಕಲಸುಯಿಧಾನಂಗಳಲ್ಲಿ ಲಿಂಗವ್ಯವಧಾನದಲ್ಲಿ ತಂದು ಸತ್ಕ್ರೀ ತಪ್ಪದೆ, ವ್ರತಕ್ಕೆ ಭಂಗವಿಲ್ಲದೆ, ನಾಣ್ಣುಡಿಗೆ ಇದಿರೆಡೆಯಾಗದೆ, ವಿಶ್ವಲಕ್ಷಣ ಶಸ್ತ್ರ ಅಭ್ಯಾಸಿಯಂತೆ, ಆವೆಡೆಯಲ್ಲಿ ಇದಿರಿಂಗೆ ತೆರಪಿಲ್ಲದೆ, ತಾ ಮುಟ್ಟುವಲ್ಲಿ ಒಳಗೆ ಕೊಂಡಂತೆ ಇರಬೇಕು. ಇಷ್ಟನರಿತು ಆಚರಣೆಯಲ್ಲಿ ಆದರಿಸಿ ನುಡಿವುದೆ ಸದ್ಭಕ್ತನ ಸ್ಥಲ. ಆತ ಸರ್ವಶೀಲಸಂಪನ್ನ ಸರ್ವಾಂಗಲಿಂಗ ಸನ್ನದ್ಧ ಆತ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
————–
ಅನ್ಯಶಬ್ದಕ್ಕೆ ಜಿಹ್ವಾಬಂಧನ, ದುರ್ಗಂಧಕ್ಕೆ ನಾಸಿಕಬಂಧನ, ನಿಂದೆಗೆ ಕರ್ಣಬಂಧನ, ದೃಕ್ಕಿಂಗೆ ಕಾಮ್ಯಬಂಧನ, ಚಿತ್ತಕ್ಕೆ ಆಶಾಬಂಧನ, ಅಂಗಕ್ಕೆ ಅಹಂಕಾರ ಬಂಧನ. ಇಂತೀ ಷಡ್ಭಾವಬಂಧಂಗಳ ಹರಿದಲ್ಲದೆ ಅರುವತ್ತುನಾಲ್ಕು ಶೀಲಕ್ಕೆ ಸಂಬಂಧಿಯಲ್ಲ. ಹೀಂಗಲ್ಲದೆ ಕಾಂಬವರ ಕಂಡು, ಅಲ್ಲಿ ಒಂದ ತಂದು, ಇಲ್ಲಿ ಒಂದ ಕೊಟ್ಟಿಹೆನೆಂದು ಕಳ್ಳನ ತಾಯಂತೆ ಅಲ್ಲಿ ಇಲ್ಲಿ ಹಾರೈಸುತ್ತ ಇಂತೀ ಸಜ್ಜನಗಳ್ಳರ ಕಂಡು ಬಲ್ಲವರೊಪ್ಪುವರೆ ಕಳ್ಳರ ವ್ರತವ ? ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರುವನೆಲ್ಲಿಯು ಒಲ್ಲನಾಗಿ.
————–
ಅರಸಿಗೆ ಆಚಾರ ಅನುಸರಣೆಯಾಯಿತ್ತೆಂದು, ಸದಾಚಾರಿಗಳೆಲ್ಲಾ ಬನ್ನಿರಿಂದು, ಕೂಲಿಗೆ ಹಾವ ಕಚ್ಚಿಸಿಕೊಂಡು ಸಾವತೆರೆದಂತೆ ದ್ರವ್ಯದ ಮುಖದಿಂದ ಸರ್ವರ ಕೂಡಿ ತಪ್ಪನೊಪ್ಪಗೊಳ್ಳಿಯೆಂದು ದಿಪ್ಪನೆ ಬೀಳುತ್ತ ತನ್ನ ವ್ರತದ ದರ್ಪಂಗೆಟ್ಟು ಕೀಲಿಗೆ ದೇವಾಲಯವ ನೋಡುವವನಂತೆ, ಕಂಬಳಕ್ಕೆ ಅಮಂಗಲವ ತಿಂಬವನಂತೆ, ಇವನ ದಂದುಗವ ನೋಡಾ ? ಇವನ ಸಂಗವ ಮಾಡಿದವನು ಆಚಾರಕ್ಕೆ ಅಂದೆ ಹೊರಗು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ.
————–
ಅಜ ಎಮ್ಮೆ ಹಾಲಬಿಟ್ಟಲ್ಲಿ ಹೇರಂಡವ ಬೆಳೆಯಲಿಲ್ಲ ಬೆಳೆದಡೆ ಮನೆಗೆ ತರಲಿಲ್ಲ ತರಲಿಲ್ಲದ ಮತ್ತೆ ಅಡಲಿಲ್ಲ ಅದು ದೀಪದ ಬೆಳಗಿಂಗೆ ದೇವರಿಗೆ ನಿಹಿತವಲ್ಲ, ಅದು ರಾಕ್ಷಸವಂಶಭೂತವಾದ ಕಾರಣ. ಕಂಡುದ ಬಿಟ್ಟು ಕಾಣದುದನರಸಿಕೊಳಬೇಕು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ವ್ರತಮುಕ್ತನ ನೇಮ.
————–
ಅರುವತ್ತುನಾಲ್ಕು ಶೀಲ, ಐವತ್ತಾರು ನೇಮ, ಮೂವತ್ತೆರಡು ಕೃತ್ಯ ಇಂತಿವು ಕಟ್ಟಳೆಗೊಳಗಾದವು. ಮಿಕ್ಕಾದ ಪ್ರಮಥರೆಲ್ಲರು ಸ್ವತಂತ್ರಶೀಲರು. ಅಣುವಿಂಗಣು, ಘನಕ್ಕೆಘನ, ಮಹತ್ತಿಂಗೆ ಮಹತ್ತಪ್ಪ ಘನಶೀಲರುಂಟು. ಆರಾರ ಅನುವಿನಲ್ಲಿ ಅನುವ ಅನುಕರಿಸಿ, ಆರಾರ ಭಾವದಲ್ಲಿ ಬಂಧಿತನಾಗಿ ಸಿಕ್ಕಿದೆಯಲ್ಲಾ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ?
————–
ಅಡಗು ಸುರೆ ಕಟಕ ಪಾರದ್ವಾರ ಪರಪಾಕ ಮುಂತಾದ ಇಂತಿವ ಬೆರೆಸುವರ ನಾ ಬೆರಸೆನೆಂದು, ಅವರ ನಿರೀಕ್ಷಿಸೆನೆಂದು, ಮತ್ತಿದ ಮರೆದು ಕೊಂಡು ಕೊಟ್ಟೆನೆಂದು ತ್ರಿವಿಧದಾಸೆಯ ಕುರಿತು ಮತ್ತವರ ಸಂಗವ ಮಾಡಿದೆನಾದಡೆ, ಲಿಂಗಕ್ಕೆ ಸಲ್ಲ, ಜಂಗಮಕ್ಕೆ ದೂರ, ಪ್ರಸಾದವಿಲ್ಲ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾದಡೂ ವ್ರತಭ್ರಷ್ಟನೆಂದು ಬಿಡುವೆ.
————–

ವಾಟ್ಸಾಪ್‌ನಲ್ಲಿ ಶೇರ್ ಮಾಡಿ

3 ಪ್ರತಿಕ್ರಿಯೆಗಳು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Close