ಕ.com ಯೂಟ್ಯೂಬ್ ಚಾನಲ್

ಸಣ್ಣ ವಯಸ್ಸಿಗೆ ಚಿರು ಸಾವು, ವೈದ್ಯರು ಹೇಳುವುದೇನು?

ಧಾವಂತಕ್ಕೆ ಬ್ರೇಕ್ ಹಾಕಿ ಹೃದಯಕ್ಕೆ ಸ್ಪೇಸ್ ಕೊಡಿ

ಚಿರಂಜೀವಿ ಸರ್ಜಾ ಅವರ ಕುಟುಂಬದಲ್ಲಿ ಎಲ್ಲರೂ ಅಂಗಸಾಧನೆ ಮಾಡಿದವರೇ ಮತ್ತು ಕಟ್ಟುಮಸ್ತು ದೇಹವನ್ನು ಹೊಂದಿದವರೇ ಆಗಿದ್ದರು. ಆದರೂ ಹೃದಯಾಘಾತದಿಂದ ಸಾವು ಎಂದರೆ ನಂಬೋದು ಬಹಳ ಕಷ್ಟ. ನೆನ್ನೆಮೊನ್ನೆ ತಾನೆ ಕೈಹಿಡಿದು ನಗುನಗುತ ಹಸೆಮಣೆ ಏರಿದ ಮದುವೆ ಗಂಡು ಈಗ ಇಲ್ಲ ಎಂದರೆ ನಂಬುವುದು ಹೇಗೆ…? ನಮ್ಮ ಈಗಿನ ವಾತಾವರಣದಲ್ಲಿ ಮನುಷ್ಯ ಆಂತರಿಕವಾಗಿ ಬಹಳ ಒತ್ತಡಕ್ಕೆ ಒಳಗಾಗುತ್ತಾ ಇದ್ದಾನೆ. ಅದು ಯಾರಿಗೂ ತಿಳಿಯುತ್ತಲೇ ಇಲ್ಲ. ಜೀವನದಲ್ಲಿ ಒಂದು ಸಮಸ್ಯೆ ಅಥವಾ ವಿಫಲತೆ ಮನುಷ್ಯನನ್ನು ಪ್ರಪಾತಕ್ಕೆ ತಳ್ಳಿಬಿಡುತ್ತದೆ. ಹಿಂದಿನ ತಲೆಮಾರಿನ ಜನರಿಗೆ ಎಷ್ಟೊಂದು ಬಡತನ ಆರ್ಥಿಕ ಮುಗ್ಗಟ್ಟು ಮತ್ತು ಕುಟುಂಬ ಸಮಸ್ಯೆಗಳಿದ್ದರೂ ಅವರು ಅವನ್ನೆಲ್ಲಾ ಮೆಟ್ಟಿ ನಿಲ್ಲುತ್ತಿದ್ದರು. ಇಂದು ಹಾಗೇಕೆ ಇಲ್ಲ ಎಂದರೆ ಮನುಷ್ಯ ತನ್ನ ದಾರಿಯಲ್ಲಿ ಎಲ್ಲವೂ ತನ್ನ ಇಚ್ಛೆಯಂತೆ ಇರಬೇಕು ಎಂದು ಬಯಸುತ್ತಾನೆ. ಸ್ವಲ್ಪ ಬದಲಾವಣೆ ಆದರೂ ಸಹಿಸಲಾರ. ನಾವು ವ್ಯಾಯಾಮ ಮಾಡುತ್ತೇವೆ, ದೇಹ ದಂಡಿಸುತ್ತೇವೆ ಯಾವುದೇ ಊಟ ಮಾಡಿದರು ಸಮಸ್ಯೆಯಿಲ್ಲ ಅಂದುಕೊಂಡಿರುತ್ತೇವೆ. ನಮ್ಮ ಪ್ರತಿದಿನದ ದಿನಚರಿಯಲ್ಲಿ ನಮ್ಮ ದೇಹ ಮತ್ತು ಮನಸ್ಸನ್ನು ಎಷ್ಟು ಶಾಂತವಾಗಿ ಇಟ್ಟುಕೊಂಡಿರುತ್ತೇವೆ ಎನ್ನುವುದು ಬಹಳ ಮುಖ್ಯ. ಇಂದು ನಮ್ಮ ನಡುವೆ ಜರುಗುತ್ತಿರುವ ಪ್ರತಿ ಘಟನೆಗಳು ಮನುಷ್ಯನನ್ನು ಸಂತೋಷಕ್ಕಿಂತ ಹತಾಶೆ, ಭಯ ಮತ್ತು ದುಃಖದ ಮಡುವಿಗೆ ತಳ್ಳುತ್ತಿವೆ. ನಮ್ಮ ಸುತ್ತಮುತ್ತ ಇರುವ ವಾತಾವರಣ ಹಾಗೂ ಆಹಾರ ಪದ್ಧತಿಗಳು ದೊಡ್ಡವರನ್ನು ಮಾತ್ರವಲ್ಲದೆ ಸಣ್ಣ ಮಕ್ಕಳನ್ನು ದೊಡ್ಡ ದೊಡ್ಡ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿವೆ. ನಮಗೆ ಎಲ್ಲಾ ವಿಷಯಗಳಿಗೂ ಸಮಯವಿರುತ್ತದೆ. ನಮ್ಮ ದೇಹ ಮತ್ತು ಆಹಾರಕ್ರಮದ ಬಗ್ಗೆ ಕಾಳಜಿವಹಿಸಲು ನಮಗೆ ಸಮಯವಿರುವುದಿಲ್ಲ!

ಈ ಆಧುನಿಕ ವೈದ್ಯಕೀಯ ಪದ್ಧತಿಗಳು ಮತ್ತು ಆಸ್ಪತ್ರೆಗಳು ಇಂದು ಮನುಷ್ಯರನ್ನು ಶೋಷಿಸುವ ಕಸಾಯಿಖಾನೆಗಳಾಗಿವೆ. ಒಂದು ಸಣ್ಣ ಸಮಸ್ಯೆಗೂ ಕೂಡ ಅಡಿಯಿಂದ ಮುಡಿಯವರೆಗೆ ಪರಿಶೀಲಿಸಲು ಬರೆದುಕೊಡುತ್ತಾರೆ. ಅವರ ಅನುಭವ ಯಾವುದಕ್ಕೂ ಬೇಡ. ಮೊದಲಿನ ವೈದ್ಯರು ನಾಡಿ ಪರೀಕ್ಷೆಯಿಂದಲೇ ಎಲ್ಲವನ್ನು ಹೇಳಿಬಿಡುತ್ತಿದ್ದರು. ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಬಂದಮೇಲೆ ಮನುಷ್ಯ ರೋಗಗಳಿಗೆ ಹೆದರುವುದನ್ನು ಮರೆತುಬಿಟ್ಟಿದ್ದಾನೆ. ಕೊರಾನಾವನ್ನು ಹೊರತುಪಡಿಸಿ ಅಂದುಕೊಂಡರೂ ಕೂಡ ಈ ಕಾಯಿಲೆಗೂ ಯಾರೂ ಭಯ ಪಡುತ್ತಿಲ್ಲ. ಆಸ್ಪತ್ರೆಗಳು, ವೈದ್ಯರುಗಳು ಯಾವುದೇ ಕಾಯಿಲೆಗಳಿಗೆ ಕೊಡುವ ಔಷಧಿ ಉಪಚಾರಗಳು ತಾತ್ಕಾಲಿಕವಾಗಿರುತ್ತದೆ. ಅವು ನಮ್ಮನ್ನು ರೋಗ ಮುಕ್ತರನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬ ಅರಿವು ಮನುಷ್ಯನಿಗೆ ಇರಬೇಕು. ಯಾವುದೇ ಕಾಯಿಲೆ ಬಂದರೂ ಒಂದೆರಡು ದಿನ ಭಯಪಡುತ್ತಾರೆ. ನಂತರ ಡಾಕ್ಟರ್ ಕೊಟ್ಟ ಮಾತ್ರೆಯನ್ನು ಊಟಕ್ಕಿಂತ ಹೆಚ್ಚಾಗಿ ಸೇವಿಸುತ್ತಾ ಬದುಕುಳಿಯುತ್ತಾರೆ. ಒಂದು ದಿನವೂ ಕೂಡ ಯಾಕೆ ಒಂದು ನಿಮಿಷವೂ ಈ ರೋಗದಿಂದ ಆಚೆ ಬರುವುದು ಹೇಗೆ….? ನಮ್ಮ ಜೀವನವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಎಂದರೇನು..? ಎಂಬ ಬಗ್ಗೆ ಯೋಚಿಸುವುದಿಲ್ಲ.

ಇಂದು ಬಹುತೇಕರು ತೆಗೆದುಕೊಳ್ಳುತ್ತಿರುವ ಅಲೋಪತಿ ವೈದ್ಯ ಪದ್ಧತಿಯು ಮನುಷ್ಯನನ್ನು ಒಂದು ರೋಗದಿಂದ ಮತ್ತೊಂದು ರೋಗಕ್ಕೆ ಅನಾಯಾಸವಾಗಿ ಕರೆದುಕೊಂಡು ಹೋಗುತ್ತಿದೆ. ಹಿಂದೆ ಹಾಗಿರಲಿಲ್ಲ ಅಡಿಗೆಮನೆಯಲ್ಲಿ ಅನೇಕ ಕಾಯಿಲೆಗಳಿಗೆ ಔಷಧಿಗಳು ದೊರೆಯುತ್ತಿದ್ದವು. ಯಾರೊಬ್ಬರೂ ಸಣ್ಣಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗುತ್ತಿರಲಿಲ್ಲ. ಇಂದು ಸಣ್ಣ ನೆಗಡಿಗೆ ಕೂಡ ಡಾಕ್ಟರನ್ನು ಹುಡುಕಿಕೊಂಡು ಹೋಗುತ್ತಿದ್ದೇವೆ. ಅದರ ದುಷ್ಪರಿಣಾಮ ಬಹುದೊಡ್ಡದು. ಹಿಂದಿನಿಂದ ನಡೆದುಬಂದ ಊಟದ ಕ್ರಮ, ಹಿತ್ತಲಿನ ಹಸಿರು ಸೊಪ್ಪುಗಳು, ಬೇಲಿ ಮೇಲಿನ ಹಾಗಲ, ಕುಂಬಳ, ಸೋರೆ, ಹೀರೆಕಾಯಿ ಗಳು , ಮನೆಯಲ್ಲಿ ಕರೆಯುತ್ತಿದ್ದ ದೇಸಿ ಆಕಳಿನ ಹಾಲು, ತುಪ್ಪ ಮೊಸರು, ಬೆಣ್ಣೆ ನಮ್ಮನ್ನು ಯಾವುದೇ ಹಣವಿಲ್ಲದೆ ಆರೋಗ್ಯವಾಗಿ ಇರಿಸುತ್ತಿದ್ದವು. ಇನ್ನು ನಾವು ತಿನ್ನುತ್ತಿರುವ ತರಕಾರಿಗಳನ್ನು ಪ್ರಾಣಿಗಳಿಗೂ ಕೂಡ ಹಾಕಲು ಯೋಗ್ಯವಾಗಿರುವುದಿಲ್ಲ ಎಂದರೇ ಒಂದು ಬಾರಿ ಯೋಚಿಸಬೇಕು. ಇನ್ನು ಊಟವನ್ನು ದೇವರೇ ಬಲ್ಲ. ಬಿಳಿ ಅಕ್ಕಿಯಲ್ಲಿ ಮಾಡಿದ ಚಿತ್ರಾನ್ನ ಪುಳಿಯೋಗರೆ ಬಾತುಗಳನ್ನು ನಮ್ಮ ಮಕ್ಕಳಿಗೆ ಬಹಳ ಪ್ರೀತಿಯಿಂದ ನಮ್ಮ ಕೈಯಾರೆ ತಿನ್ನಿಸಿ ವಿಷಾವುಣಿಸುತ್ತಿದ್ದೇವೆ ಎಂಬುದನ್ನು ಮರೆತಿದ್ದೇವೆ. ಕೇವಲ ದುಡ್ಡಿನ ಹಿಂದೆ ಓಡುತ್ತಾ , ಈ ಹೃದಯಕ್ಕೆ ಬೇಕಾಗಿರುವ ಕರುಣೆ, ಪ್ರೀತಿ, ನಂಬಿಕೆ, ತೃಪ್ತಿ ಎಂಬುದನ್ನು ಮರೆತ್ತಿದ್ದೇವೆ. ಅದನ್ನೇ ವೈದ್ಯ ಭಾಷೆಯಲ್ಲಿ ಹೃದಯಾಘಾತ ಎನ್ನುವುದು. ನಮ್ಮ ಪ್ರತಿಯೊಂದು ಅಂಗಗಳು ಎಷ್ಟೊಂದು ಬೆಲೆಬಾಳುತ್ತದೆ ಎಂಬುದನ್ನು ಆಸ್ಪತ್ರೆಯಲ್ಲಿ ಮಲಗಿರುವ ಹೃದಯ, ಕಿಡ್ನಿ, ಲಿವರ್ ಸಮಸ್ಯೆಯಿರುವ ರೋಗಿಗಳನ್ನು ಕೇಳಿ ಆಗಲಾದರೂ ಅರ್ಥವಾದೀತು. ಈ ಅಂಗಗಳು ನಮಗೆ ಪುಕ್ಕಟೆಯಾಗಿ ಹಗಲಿರುಳು ವಿಶ್ರಾಂತಿಯಿಲ್ಲದೆ ಕೆಲಸ ಮಾಡುತ್ತಿವೆ ಎಂದರೆ ನಂಬಲೇಬೇಕು. ಅವುಗಳ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಬೇರೆ ಯಾವುದೇ ಕೆಲಸಕ್ಕಿಂತ ಆದ್ಯ ಕರ್ತವ್ಯವಾಗಿದೆ ಎಂಬುದನ್ನು ಮರೆಯಬಾರದು

ಈಗ ಎಲ್ಲರೂ ಹೇಳುವುದು ‘ಚಿರಂಜೀವಿ ಸರ್ಜಾ ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಾಯಬಾರದಿತ್ತೆಂದು’, ಸಾವಿಗೆ ಕಾರಣಗಳು ನೂರಾರು ಕೇವಲ ವಯಸ್ಸಲ್ಲ. ಇನ್ನೇನು ಸತ್ತೇ ಹೋಗುತ್ತಾರೆ ಎನ್ನುವವರು ಇಪ್ಪತ್ತು ಮುವ್ವತ್ತು ವರ್ಷಗಳ ವರೆಗೆ ಬದುಕಿದವರನ್ನು ನೋಡಿದ್ದೇವೆ. ಕೆಲವರು ಗೊತ್ತಾಗದ ಹಾಗೆ ಸತ್ತು ಹೋಗುತ್ತಾರೆ. ಯಾರು ಹೇಗೆ ಸತ್ತರೂ ಈ ಸಮಾಜ ಎಲ್ಲರನ್ನೂ ಅಷ್ಟೇ ಬೇಗ ಮರೆತು ಬಿಡುತ್ತದೆ ಎಂಬುದು ವಾಸ್ತವ ಸತ್ಯ. ಆದುದರಿಂದ ನಮ್ಮ ಧಾವಂತದ ಬದುಕನ್ನು ಸ್ವಲ್ಪವಾದರೂ ಕಡಿಮೆ ಸ್ಪೀಡಿನಲ್ಲಿ ಓಡಿಸೋಣ. ಯಾರು ಇರಲಿ ಇಲ್ಲದಿರಲಿ ತಿರುಗುವ ಭೂಮಿ ತಿರುಗುತ್ತಲೇ ಇರುತ್ತದೆ. ಬೀಸುವ ಗಾಳಿ ಬೀಸುತ್ತಿರುತ್ತದೆ. ಒತ್ತಡದ ಧಾವಂತವನ್ನು ಕಡಿಮೆ ಮಾಡಿಕೊಂಡು ಹೃದಯದ ಕಾಳಜಿ ಮಾಡಿಕೊಳ್ಳುತ್ತಲಿರಬೇಕು.

ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ತಡೆಯುವುದು ಹೇಗೆ?

ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ತೀವ್ರ ಆತಂಕಕಾರಿ ವಿಷಯ. ಭಾರತದಲ್ಲಿ ಹೃದಯಾಘಾತದ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿದೆ. ಇಂದಿನ ಮಕ್ಕಳಿಗೆ ಶಾಲಾ ದಿನಗಳಿಂದಲೇ ಹೃದಯಘಾತದ ದುಷ್ಪರಿಣಾಮಗಳಿಗೆ ಕಾರಣವಾಗುವ ವಿವಿಧ ಗಂಡಾಂತರಕಾರಿ ಅಂಶಗಳ ಬಗ್ಗೆ ತಿಳಿಸಿ ಅವರನ್ನು ಜಾಗೃತಗೊಳಿಸುವ ಅಗತ್ಯವಿದೆ.

ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ತಡೆಯುವುದು ಹೇಗೆ? ಭಾರತದಲ್ಲಿ ಹೃದಯಾಘಾತದ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿದೆ.ಇದಕ್ಕೆ ವಿರೋಧಾಭಾಸವಾಗಿ ಅಭಿವೃದ್ದಿ ಹೊಂದಿದ ರಾಷ್ಟ್ರಗಳಲ್ಲಿ ಹೃದಯಘಾತ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗುತ್ತಿದೆ. ಆ ದೇಶಗಳಲ್ಲಿನ ಜನ ಸಾಮಾನ್ಯರಲ್ಲಿ ಹೆಚ್ಚಿದ ಜಾಗೃತಿ ಹಾಗೂ ಆರಂಭದ ವರ್ಷಗಳಲ್ಲೇ ಕೈಗೊಂಡ ಮುನ್ನೆಚ್ಚರಿಕೆಗಳ ಫಲವಾಗಿ ಹಾರ್ಟ್ ಆಟ್ಯಾಕ್ ಹತೋಟಿಗೆ ಬಂದಿದೆ. ಮುಂಜಾಗ್ರತೆ ಕ್ರಮಗಳನ್ನು ಪರಿಣಾಮಕಾರಿಯಾಗಿಅಳವಡಿಸಿಕೊಳ್ಳುವುದರಿಂದ ಹೃದಯಾಘಾತವನ್ನು ದೊಡ್ಡ ಮಟ್ಟದಲ್ಲಿ ತಡೆಗಟ್ಟಬಹುದು.

ಭಾರತದಲ್ಲೂ ತುರ್ತಾಗಿ ಈ ಜಾಗೃತಿ ಮತ್ತು ಅರಿವಿನ ಅಗತ್ಯವಿದೆ. ಏಕೆಂದರೆ ಉತ್ಪಾದಕತೆಯ ಜೀವನದ (ಹಣ ಸಂಪಾದನೆಯ) ಗರಿಷ್ಠ ಮಟ್ಟದಲ್ಲಿದ್ದಾಗ ಬಹುತೇಕ ಮಂದಿ ಹೃದಯಘಾತಕ್ಕೆ ತುತ್ತಾಗುತ್ತಿರುವುದರಿಂದ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಬದಲಾದ ಜೀವನಶೈಲಿ, ದೈಹಿಕ ಶ್ರಮವಿಲ್ಲದ ದುಡಿಮೆ ಭಾರತೀಯರಲ್ಲಿ ಹೃದಯಾಘಾತದ ಸಾಧ್ಯತಾ ಪ್ರಮಾಣ ಹೆಚ್ಚಿಸಿದೆ. ಆದರೂ ಶೇ. 76ರಷ್ಟುಜನರು ಸಮಸ್ಯೆ ಅಂತಿಮ ಹಂತಕ್ಕೆ ಹೋಗುವ ತನಕ ವೈದ್ಯರ ತಪಾಸಣೆಗೆ ಒಳಗಾಗುತ್ತಿಲ್ಲ.

20ರಿಂದ 65 ವಯೋಮಾನದ ಶೇ.60ರಷ್ಟು ಭಾರತೀಯರಿಗೆಈ ಕುರಿತು ಸೂಕ್ತ ತಿಳುವಳಿಕೆಯೇ ಇಲ್ಲ. 20ರಿಂದ 30ರ ಹರೆಯದ ಯುವ ಜನತೆ, ತಮಗೆ ಹೃದಯಸಂಬಂಧಿ ಸಮಸ್ಯೆ ಬರುವುದಿಲ್ಲ ಎಂಬ ದೃಢನಂಬಿಕೆಯಲ್ಲಿ ತಪಾಸಣೆಗೆ ಒಳಗಾಗುವುದಿಲ್ಲ.ಆದರೆ, ಶೇ. 20ರಷ್ಟು ಜನರಿಗೆ ಹೃದ್ರೋಗ ವಂಶವಾಹಿಯಾಗಿದೆ ಎಂದು ಆರೋಗ್ಯ ಸಮೀಕ್ಷೆ ತಿಳಿಸಿದ್ದು, ಆಧುನಿಕ ಜೀವನಶೈಲಿಯು ಯುವಜನತೆಯಲ್ಲಿ ಹೃದಯನಾಳ ತೊಂದರೆ, ಹೃದಯಾಘಾತ, ಪಾಶ್ರ್ವವಾಯು ಸಂಭವವನ್ನು ಮೂರುಪಟ್ಟು ಹೆಚ್ಚಿಸಿದೆ. ಭಾರತದಲ್ಲಿ ಹೃದಯಾಘಾತ ಸಂಭವದ ವಯೋಮಿತಿಯು 40ರಿಂದ 30 ವರ್ಷಕ್ಕೆ ಇಳಿದಿದೆ. ಇದೊಂದು ಆತಂಕದ ವಿಷಯ.

ಕೂತಲ್ಲೇ ಕೆಲಸ (ಮಾಹಿತಿ ತಂತ್ರಜ್ಞಾನ, ಕಚೇರಿ ಕೆಲಸ); ವಿಶ್ರಾಂತಿರಹಿತ ದುಡಿಮೆ, ದೈಹಿಕ ಚಟುವಟಿಕೆ ಇಲ್ಲದಿರುವುದು, ಧೂಮಪಾನ, ಮದ್ಯಪಾನ ಹವ್ಯಾಸ-ಹೃದಯಾಘಾತ ಹೆಚ್ಚಲು ಪ್ರಮುಖ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್ 2) ಪ್ರಕಾರ, ಪ್ರಪಂಚದ ನಂಬರ್ ಒನ್ ಕಿಲ್ಲರ್ ಹೃದಯಾಘಾತ.ಒತ್ತಡದ ಜೀವನ, ದೇಹದಲ್ಲಿ ಹೆಚ್ಚಿನ ಕೊಬ್ಬಿನಂಶ, ಧೂಮಪಾನ, ಮದ್ಯಪಾನ, ದೈಹಿಕ ಶ್ರಮ ರಹಿತ ಜೀವನ ಹೃದಯಾಘಾತ ಸಂಭವ ಹೆಚ್ಚಲು ಪ್ರಮುಖ ಕಾರಣ. ನಿಯಮಿತವಾಗಿ ದೇಹ ತೂಕದ ತಪಾಸಣೆ, ಕೊಬ್ಬು ರಹಿತ ಪದಾರ್ಥಗಳ ಸೇವನೆ ಹಾಗೂ ಪ್ರತಿದಿನಿತ್ಯ 45 ನಿಮಿಷಗಳ ಕಾಲ ವೇಗದ ನಡಿಗೆ ಮಾಡುವ ಮೂಲಕ ಹೃದಯ ಸಂಬಂಧಿ ರೋಗಗಳನ್ನು ನಿಯಂತ್ರಿಸಬಹುದು.

ಜೀವನಶೈಲಿ ಬದಲಾವಣೆ:

ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ತಡೆಯುವುದು ಹೇಗೆ?ಒತ್ತಡಕ್ಕೆ ಸಂಬಂಧಿಸಿದ ಹೃದ್ರೋಗ ತಡೆಗಟ್ಟಲು ಜೀವನಶೈಲಿ ಬದಲಾವಣೆಯೂ ಅಗತ್ಯ.

1. ಧೂಮಪಾನ ವರ್ಜಿಸಿ : ಧೂಮಪಾನ ದುಶ್ಚಟದಿಂದ ದೂರವಿರಿ. ಧೂಮಪಾನ ವರ್ಜಿಸಲು ನಿರ್ಧರಿಸಿದ ತಕ್ಷಣ ಸಿಗರೇಟ್‍ಗಳು, ಆ್ಯಷ್‍ಟ್ರೇ ಮತ್ತು ಲೈಟರ್‍ನನ್ನು ಹೊರಗೆ ಎಸೆಯಿರಿ.ನಿಮ್ಮ ವೈದ್ಯರೊಂದಿಗೆ ಈ ಕುರಿತು ಮುಕ್ತ ಚರ್ಚೆ ನಡೆಸಿರಿ. ಧೂಮಪಾನ ವರ್ಜಿಸಿದ ನಂತರ ನಿಮ್ಮ ದೇಹದಲ್ಲಿ ಕೆಲವು ಪ್ರತಿಕ್ರಿಯೆಗಳು ಕಂಡುಬಂದರೆ ಔಷಧಿ ನೀಡಬೇಕಾಗುತ್ತದೆ. ನಿಮಗೆ ನಿಕೋಟಿನ್ ಪರ್ಯಾಯದ ಅಗತ್ಯವಿದಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಇದು ಗಮ್, ಇನ್‍ಹೇರಲ್ ಮೊದಲಾದ ರೂಪದಲ್ಲಿ ಬರುತ್ತದೆ.

2. ಆರೋಗ್ಯಕರ ಆಹಾರ : ಆರೋಗ್ಯ ರಕ್ಷಣೆ ಹಾಗೂ ದೈಹಿಕ-ಮಾನಸಿಕ ಆರೋಗ್ಯ ಹೆಚ್ಚಳದಲ್ಲಿ ಉತ್ತಮ ಆಹಾರ ಮಹತ್ವದ ಪಾತ್ರ ವಹಿಸುತ್ತದೆ. ಆರೋಗ್ಯಕರವಾದ ಸಂತುಲಿತ ಮತ್ತು ಪೌಷ್ಟಿಕ ಆಹಾರ ದೇಹವನ್ನು ಸಮತೋಲನದಲ್ಲಿ ಇಡುತ್ತದೆ. ಆದರೆ ಸಕಾಲದಲ್ಲಿ ಸೇವನೆ ಮತ್ತು ಸೂಕ್ತ ಪ್ರಮಾಣದಲ್ಲಿ ಆಹಾರ ಸೇವನೆ ಮುಖ್ಯ.

3. ಉತ್ತಮ ನಿದ್ರೆ : ಮನುಷ್ಯನ ಆರೋಗ್ಯ ಸ್ಥಿತಿಗೆ ಸೂಕ್ತ ನಿದ್ರೆಯೂ ಅತ್ಯಗತ್ಯ. ಸಾಕಷ್ಟು ನಿದ್ರೆಯ ಮಹತ್ವದ ಬಗ್ಗೆ ಜನರಲ್ಲಿ ಅನೇಕ ತಪ್ಪು ತಿಳುವಳಿಕೆ ಇದೆ. ಸೂಕ್ತ ಸಮಯದಲ್ಲಿ ನಿದ್ರೆ ಮಾಡುವುದು ಒಳ್ಳೆಯದು. ಬೇಗನೆ ಮಲಗಿ ಬೇಗನೆ ಏಳುವುದು ಉತ್ತಮ ಅಭ್ಯಾಸ. ಆದಾಗ್ಯೂ ಸಾಕಷ್ಟು ನಿದ್ರೆ ಇಲ್ಲದಿದ್ದರೆ ಕೆಲವೊಂದು ತೊಂದರೆಗಳಿಗೆ ಕಾರಣವಾಗುತ್ತದೆ. ಅನಿದ್ರತೆ, ತಲೆನೋವು, ನಿರುತ್ಸಾಹ, ಮಂಕು ಇತ್ಯಾದಿ. ಕೆಲವೊಮ್ಮೆ ಇದು ಬೊಜ್ಜು, ಅಜೀರ್ಣ, ಜ್ಞಾಪಕ ಶಕ್ತಿ ನಷ್ಟದಂಥ ಗಂಭೀರ ಸಮಸ್ಯೆಗಳಿಗೂ ಎಡೆ ಮಾಡಿಕೊಡಬಹುದು.

ಹೃದಯಾಘಾತದ ಸಾಮಾನ್ಯ ಲಕ್ಷಣಗಳು :

1. ಎದೆನೋವು, ಹೃದಯ ಭಾರವಾಗುವಿಕೆ
2. ಉಸಿರಾಟದಲ್ಲಿ ತೊಂದರೆ
3. ಮಾನಸಿಕ ಕ್ಷೋಭೆ ಅಥವಾ ಒತ್ತಡದಂಥ ಲಕ್ಷಣಗಳು
4. ಹೆಗಲು, ಭುಜ ಅಥವಾ ದವಡೆ ನೋವು
5. ಅಸ್ವಸ್ಥತೆ
6. ಕಡಿಮೆ ನಾಡಿಮಿಡಿತ
7. ಅತಿಯಾಗಿ ಬೆವರುವಿಕೆ
8. ವಾಂತಿ
9. ತಲೆಸುತ್ತುವಿಕೆ/ಶಿರೋಭ್ರಮಣೆ

ಹೃದಯಾಘಾತದ ಚಿಹ್ನೆ ಮತ್ತು ಲಕ್ಷಣಗಳಲ್ಲಿ ವ್ಯತ್ಯಾಸಗಳಿರುತ್ತವೆ. ಒಮ್ಮೊಮ್ಮೆ ಈ ಲಕ್ಷಣ ಬಿರುಸಾಗಿದ್ದರೆ, ಕೆಲವೊಮ್ಮೆ ಲಘುವಾಗಿರುತ್ತದೆ. ಕೆಲವು ಸಂದರ್ಭದಲ್ಲಿ ಯಾವುದೇ ಲಕ್ಷಣವಿಲ್ಲದೇ ಅಥವಾ ಲಘು ಲಕ್ಷಣಗಳೊಂದಿಗೆ ಸಂಭವಿಸುವ ಹಾರ್ಟ್ ಅಟ್ಯಾಕ್ ತೀವ್ರ ಎದೆನೋವಿನಂಥ ಮರಣಾಂತಿಕ ಪರಿಣಾಮಗಳಷ್ಟೇ ಅಪಾಯ ತಂದೊಡ್ಡುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಹೃದಯಾಘಾತಕ್ಕೆ ಕಾರಣವಾಗುವ ಕೆಲವು ರಿಸ್ಕ್ ಫ್ಯಾಕ್ಟರ್‍ಗಳು:

1. ತಂಬಾಕು ಸೇವನೆ
2. ಅಧಿಕ ಕೊಲೆಸ್ಟರಾಲ್3. ಎಲ್‍ಡಿಎಲ್ ಕೊಲೆಸ್ಟರಾಲ್
4. ಎಚ್‍ಡಿಎಲ್ ಕೊಲೆಸ್ಟರಾಲ್
5. ಅಧಿಕ ಬ್ಲಡ್ ಷುಗರ್
6. ಅಧಿಕ ರಕ್ತದೊತ್ತಡ
7. ಅಧಿಕ ತೂಕ
8. ಐಷಾರಾಮಿ ಅಭ್ಯಾಸಗಳು
9. ಉದ್ವೇಗದ ಒತ್ತಡ ಮತ್ತು ಆಯಾಸ
10. ಅನುವಂಶಿಯ ಅಂಶಗಳು

ಡಾ. ಮಹಾಂತೇಶ ಚರಂತಿಮಠ
(ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್, ಬೆಂಗಳೂರು)

ವಾಟ್ಸಾಪ್‌ನಲ್ಲಿ ಶೇರ್ ಮಾಡಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Close